ವೃದ್ಧೆ ಬಾವಿಗೆ : ಪರಿಚಯಸ್ಥ ಆಟೋ ಚಾಲಕ ಆತ್ಮಹತ್ಯೆ
ಮೂಡುಬಿದಿರೆ : ನೆಲ್ಲಿಕಾರು ಗ್ರಾಮ ಪಂಚಾಯತ್ 70ರ ಹರೆಯದ ವೃದ್ಧೆಯೋವ೯ರು ಬಾವಿಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅದೇ ಗ್ರಾಮದ ಆಟೋ ಚಾಲಕನೋವ೯ ರೆಂಜಾಳದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದು ಬಂದಿದೆ.
ನೆಲ್ಲಿಕಾರಿನ ರಿಕ್ಷಾ ಚಾಲಕ ಸತೀಶ್ ಶೆಟ್ಟಿ ( 45) ಆತ್ಮಹತ್ಯೆ ಮಾಡಿಕೊಂಡವ. ಪರಿಸರದ ಪದ್ಮಾವತಿ ( 70) ಎಂಬವರು ಬಾವಿಗೆ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.

ಪದ್ಮಾವತಿ ಅವರು ಮನೆಯಲ್ಲಿ ಒಬ್ಬರೇ ಇರುವುದರಿಂದ ಅವರಿಗೆ ಬೇಕಾದ ಮನೆ ಸಾಮಾಗ್ರಿಗಳು ಮತ್ತು ಅವರನ್ನು ಕರೆದೊಯ್ಯಲು ಸತೀಶ್ ಶೆಟ್ಟಿ ಅವರ ರಿಕ್ಷಾವನ್ನೇ ಕರೆಯುತ್ತಿದ್ದರೆನ್ನಲಾಗಿದ್ದು ಅವರಿಬ್ಬರೂ ಒಂದೇ ಊರಿನವರಾಗಿದ್ದರಿಂದ ಪರಸ್ಪರ ಆತ್ಮೀಯತೆಯಿಂದ ಇದ್ದರೆನ್ಮಲಾಗಿದೆ.‌ ಅಲ್ಲದೆ ಸಂಜೆ ವೇಳೆಗೆ ಅವರಿಬ್ಬರೂ ಒಟ್ಟಿಗೆ ಕುಳಿತು ಅಮಲು ಪದಾಥ೯ ಸೇವಿಸುತ್ತಿದ್ದರೆನ್ನಲಾಗಿದೆ. 

ಗುರುವಾರ ಸಂಜೆ ಕೂಡಾ ಇಬ್ಬರೂ ಒಟ್ಟಿಗೆ ಕುಡಿದಿದ್ದಾರೆ. ಆದರೆ ಶುಕ್ರವಾರ ಬೆಳಿಗ್ಗೆ ಪದ್ಮಾವತಿ ಅವರು ಬಾವಿಯಲ್ಲಿದ್ದು ಅವರನ್ನು ಮೇಲಕ್ಕೆತ್ತಲಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಸತೀಶ್ ಶೆಟ್ಟಿ ನಾಪತ್ತೆಯಾಗಿದ್ದು ಆತನ ಶವ ರೆಂಜಾಳದ ಹಾಡಿಯಲ್ಲಿ ಶನಿವಾರ ಪತ್ತೆಯಾಗಿದೆ.

 ಈ ಎರಡೂ ಪ್ರಕರಣಕ್ಕೆ ಕಾರಣ ಏನೆನ್ನುವುದು ತಿಳಿದು ಬಂದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪದ್ಮಾವತಿ ಅವರು ಗುಣಮುಖರಾದ ಬಳಿಕ ನೀಡುವ ಹೇಳಿಕೆಯೇ ಸತ್ಯಾಸತ್ಯತೆ ಹೊರ ಬರಲಿದೆ.
ಮೂಡುಬಿದಿರೆ ಮತ್ತು ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ.