ಮೂಡುಬಿದಿರೆ: ಇಲ್ಲಿನ ದೇವಾಡಿಗರ ಸುಧಾರಕ ಸಂಘದ ಆಡಳಿತಕ್ಕೊಳಪಟ್ಟಿರುವ ಗೌರಿಕೆರೆಯ ಶ್ರೀ ರಾಮ ಮಂದಿರದಲ್ಲಿ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ.6 ರಿಂದ 10 ರವರೆಗೆ ನಡೆಯಲಿದೆ ಎಂದು ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷರಾದ ಪುರಂದರ ದೇವಾಡಿಗ ಅವರು ತಿಳಿಸಿದ್ದಾರೆ.
ಅವರು ಶನಿವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶ್ರೀ ರಾಮ ಮಂದಿರವು ಕಾಲಕಾಲಕ್ಕೆ ಜೀರ್ಣೋದ್ಧಾರ ಹೊಂದಿ 2014 ರಲ್ಲಿ ನೂತನ ಗರ್ಭಗುಡಿ ಸಹಿತ ಶ್ರೀ ರಾಮ ದೇವರ ಮತ್ತು ಪರಿವಾರ ದೇವರುಗಳ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಗಿದ್ದು ಇದೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ ಎಂದ ಅವರು ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಉತ್ಸವಗಳು, ಪೂಜೆ,ಭಜನೆ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ದೇವಾಡಿಗರ ಸುಧಾರಕ ಸಂಘವು 1944 ರಲ್ಲಿ ಸ್ಥಾಪಿಸಲ್ಪಟ್ಟು 1959 ರಲ್ಲಿ ನೋಂದಣಿಗೊಂಡಿರುತ್ತದೆ, ಕಳೆದ 80 ವರ್ಷಗಳಿಂದ ಸಮಾಜದ ಹಿತ ರಕ್ಷಣೆಯನ್ನು ಹೊತ್ತು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಸಂಘವು ಸ್ವಂತ ನಿವೇಶನ,ಸುಮಾರು 500 ಜನರು ಕುಳಿತುಕೊಳ್ಳಬಹುದಾದ ಸುಸಜ್ಜಿತ ಸೀತಾರಾಮ ಕಲ್ಯಾಣ ಮಂಟಪ,ವಿಶಾಲವಾದ ಭೋಜನ ಗೃಹ ಹಾಗೂ ಸಮಾಜ ಭವನವನ್ನು ಹೊಂದಿದೆ, ಅವಿಭಜಿತ ದ.ಕ.ಜಿಲ್ಲೆಯಲ್ಲಿರುವ ದೇವಾಡಿಗರ ಸಂಘಗಳಲ್ಲಿ ಅಗ್ರಸ್ಥಾನದಲ್ಲಿರುವ ಸಂಸ್ಥೆಗಳಲ್ಲಿ ನಮ್ಮ ಸಂಸ್ಥೆಯೂ ಒಂದಾಗಿದೆ ಎಂದರು.
ಸಂಘವು 80 ನೇ ವರ್ಷದ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಮುದಾಯ ಭವನ ಉದ್ಘಾಟನೆ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಮೇ.5 ರಂದು ಸಂಜೆ 4 ರಿಂದ ಸ್ವರಾಜ್ಯ ಮೈದಾನದಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಚೌಟರ ಅರಮನೆಯ ಕುಲದೀಪ್ ಎಂ.ಅವರು ಚಾಲನೆ ನೀಡಲಿದ್ದಾರೆ.
ಪ್ರತಿದಿನ ಸಂಜೆ 5 ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮೇ. 6ರಂದು ಬೆಳಿಗ್ಗೆಯಿಂದ ಋತ್ವಿಜರ ಸ್ವಾಗತ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸೇರಿದಂತೆ ವಿವಿಧ ಹೋಮಗಳು ನಡೆದು ಮಹಾಪ್ರಸಾದ ವಿತರಣೆಯಾಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ ಉದ್ಘಾಟಿಸಲಿದ್ದು, ಬಾಹುಬಲಿ ಪ್ರಸಾದ್, ಮಾಧವಿ ಎಸ್ ಭಂಡಾರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪ್ರತಿಷ್ಠಾ ಮಹೋತ್ಸವದ ವಿಧಿವಿಧಾನ :
ಮೇ 7ರಂದು ಶ್ರೀ ಸೀತಾ ರಾಮಚಂದ್ರ, ಲಕ್ಷ್ಮಣ, ಹನುಮಂತ ಪರಿವಾರ ಹಾಗೂ ರಕ್ಷೇಶ್ವರಿ, ಚಾಮುಂಡಿ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ ನಡೆಯಲಿದೆ. ಮೇ 8ರಂದು ಬೆಳಿಗ್ಗೆ 9.51ಕ್ಕೆ ಮಿಥುನ ಲಗ್ನದ ಸುಮುಹೂರ್ತದಲ್ಲಿ ಶ್ರೀ ರಾಮ ದೇವರಿಗೆ 108 ಕಲಶಗಳೊಂದಿಗೆ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಸಂಜೆ 6.30ಕ್ಕೆ ನಡೆಯುವ ಸಮುದಾಯ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ಸಭಾಪತಿ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ನಳಿನ್ ಕುಮಾರ್ ಕಟೀಲ್, ಮಿಥುನ ರೈ, ಡಾ. ಎಂ.ಎನ್. ರಾಜೇಂದ್ರ ಕುಮಾರ್, ಡಾ. ಎಂ. ಮೋಹನ ಆಳ್ವ ಸೇರಿದಂತೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ, ಭಜನಾ ಕಾರ್ಯಕ್ರಮ
ಐದು ದಿನಗಳ ಕಾಲ ವಿವಿಧ ತಂಡಗಳಿಂದ ಭಜನೆ, ಸ್ಯಾಕ್ಸೋಫೋನ್ ವಾದನ, ಚೆಂಡೆ ವಾದನ, ನೃತ್ಯ ವೈವಿಧ್ಯ ಹಾಗೂ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಮೇ 9ರಂದು ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ಅಹೋರಾತ್ರಿ ಭಜನಾ ಸಂಕೀರ್ತನೆ ಹಮ್ಮಿಕೊಳ್ಳಲಾಗಿದೆ. ಮೇ 10ರಂದು ಮಹಾಚಂಡಿಕಾ ಯಾಗ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ರಕ್ಷೇಶ್ವರಿ ದೈವಕ್ಕೆ ಗಗ್ಗರ ಸೇವೆ ನಡೆಯುವುದರೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ ಎಂದು ಪುರಂದರ ದೇವಾಡಿಗ ಮಾಹಿತಿ ನೀಡಿದರು.ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರತ್ನಾಕರ ಸಿ.ಮೊಯ್ಲಿ, ಕಾರ್ಯಾಧ್ಯಕ್ಷರಾದ ವಿಶ್ವನಾಥ ಪಿ.ದೇವಾಡಿಗ, ಖಜಾಂಚಿ ಯಶೋಧರ ದೇವಾಡಿಗ,ಸೋಮನಾಥ ಮೊಯ್ಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
.


0 Comments