ಕಂಬಳಕ್ಕೆ ರಾಷ್ಟ್ರದ ಮಾನ್ಯತೆಗಾಗಿ ಮೋದಿಗೆ ಮನವಿ : ರಾಜ್ಯ ಕಂಬಳ ಅಸೋಸಿಯೇಷನ್ ನಿಧಾ೯ರ
ಮೂಡುಬಿದಿರೆ : ರಾಜ್ಯ ಕಂಬಳ ಅಸೋಸಿಯೇಷನ್, ಜಿಲ್ಲಾ ಕಂಬಳ ಸಮಿತಿ, ವ್ಯವಸ್ಥಾಪಕರು ಹಾಗೂ ಕೋಣಗಳ ಯಜಮಾನರ ನೇತೃತ್ವದಲ್ಲಿ ಬುಧವಾರ ಸಮಾಜ ಮಂದಿರದಲ್ಲಿ ನಡೆದ ಜಂಟಿ ಸಭೆಯಲ್ಲಿ ಕಂಬಳ ಅಸೋಸಿಯೇಶನ್ ನ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರಕಾರ ಈಗಾಗಲೇ ಮಾನ್ಯತೆ ನೀಡಿದೆ ಇದೀಗ ರಾಷ್ಟ್ರ ಮಟ್ಟದಲ್ಲಿ ಈ ಕ್ರೀಡೆಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ. 22ರಂದು ಉಡುಪಿಗೆ ಬಂದಾಗ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು.
ನಂತರ ನಡೆದ ಸಭೆಯಲ್ಲಿ ಹಲವು ಚಚೆ೯ಗಳು ನಡೆದಿದ್ದು, ಕಂಬಳದಲ್ಲಿ ತೀರ್ಪುಗಾರರ ಸಂಖ್ಯೆಯನ್ನು ಕಡಿತಗೊಳಿಸಿ ರುಟಿನ್ ಪ್ರಕಾರ ತೀರ್ಪುಗಾರರನ್ನು ನಿಯುಕ್ತಿಗೊಳಿಸುವುದು ಮತ್ತು ಕೋಣಗಳನ್ನು ಬಿಡಿಸುವವರು ಗಂತಿನಲ್ಲಿ ಅನಾವಶ್ಯಕವಾಗಿ ಅತ್ತಿಂದಿತ್ತ ಓಡಾಡುವುದನ್ನು ನಿಲ್ಲಿಸಬೇಕು ಮತ್ತು ಕೋಣಗಳನ್ನು ಬಿಡಿಸುವಾಗ ಸಮಯ ಪರಿಪಾಲನೆಯನ್ನು ಕಡ್ಡಾಯಗೊಳಿಸುವುದೆಂದು ತೀಮಾ೯ನಿಸಲಾಯಿತು.
ಗಂತಿನಲ್ಲಿ ಕೋಣಗಳನ್ನು ಬಿಡುವಾಗ ಕೆಲವೊಮ್ಮೆ 1 ತಾಸಿನವರೆಗೂ ವಿಳಂಬವಾಗಿ ಒಂದು ದಿನದಲ್ಲಿ ಮುಗಿಯಬೇಕಾದ ಕಂಬಳ ಎರಡು ದಿನಗಳ ವರೆಗೆ ಮುಂದುವರಿಯುತ್ತದೆ. ಇದರಿಂದ ಕಾನೂನಿನ ಉಲ್ಲಂಘನೆಯ ಆರೋಪ ಆಯೋಜಕರ ವಿರುದ್ಧ ಕೇಳಿಬರುತ್ತಿದೆ. ಕೋಣಗಳನ್ನು ಬಿಡುವಾಗ ತೀರ್ಪುಗಾರರು 10 ನಿಮಿಷಕ್ಕಿಂತ ಹೆಚ್ಚು ವಿಳಂಬವಾಗದಂತೆ ನೋಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಕಂಬಳ ಮುಕ್ತಾಯವಾಗಬೇಕಾದರೆ ತೀರ್ಪುಗಾರರು ಕೂಡ ಸಮಯ ಪರಿಪಾಲನೆ ಮಾಡಿಕೊಳ್ಳುವುದು ಅಗತ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.
ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಮಾತನಾಡಿ ಸಧ್ಯ ಕಂಬಳಕ್ಕೆ 24 ಮಂದಿ ತೀರ್ಪುಗಾರರಿದ್ದು ಇಷ್ಟೊಂದು ಸಂಖ್ಯೆಯ ತೀರ್ಪುಗಾರರು ಕಂಬಳಕ್ಕೆ ಬೇಕಿಲ್ಲ. ಖರ್ಚು ವೆಚ್ಚವನ್ನು ನಿಯಂತ್ರಿಸುವ ದೃಷ್ಟಿಯಿಂದಲು ಈ ನಿರ್ಧಾರ ಅನಿವಾಯ೯ವಿದೆ. ಎಷ್ಟು ಮಂದಿ ಮತ್ತು ಯಾವ್ಯಾವ ತೀರ್ಪುಗಾರರು ಬೇಕೆಂಬುದನ್ನು ಆಯಾಯ ಕಂಬಳ ಆಯೋಜಕರು ನಿರ್ಧರಿಸಬೇಕು. ಇವರಿಗೆ ನೀಡುವ ವೇತನದ ಬಗ್ಗೆ ರಾಜ್ಯ ಕಂಬಳ ಸಮಿತಿ ತಿಳಿಸುವುದು ಎಂದರು.
ಸರಕಾರದಿಂದ ಬಿಡುಗಡೆಯಾದ ಅನುದಾನವನ್ನು ಎಲ್ಲಾ ಕಂಬಳಗಳಿಗೆ ಸಮಾನವಾಗಿ ಹಂಚಲು ನಿರ್ಧರಿಸಲಾಯಿತು.
ಸನ್ಮಾನ : ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕಂಬಳ ಕೋಣಗಳ ಯಜಮಾನರಾದ ಭಾಸ್ಕರ್ ಕೋಟ್ಯಾನ್ ಹಾಗೂ ಶಾಂತರಾಮ ಶೆಟ್ಟಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಜಪ್ಪು ಕಂಬಳದ ಅಧ್ಯಕ್ಷ ಅನಿಲ್ ಶೆಟ್ಟಿ, ಹೊಕ್ಕಾಡಿಗೋಳಿ ಕಂಬಳದ ರಶ್ಮಿತ್ ಶೆಟ್ಟಿ, ನಾರಿಂಗಾನ ಕಂಬಳದ ಕಾಯಾ೯ಧ್ಯಕ್ಷ ಪ್ರಶಾಂತ್ ಕಾಜವ, ಐಕಳ ಕಂಬಳದ ಕಾಯಾ೯ಧ್ಯಕ್ಷ ಚಿತ್ತರಂಜನ್ ಭಂಡಾರಿ, ಗುರುಪುರ ಕಂಬಳದ ವಿಜಯಕುಮಾರ್, ಮುಲ್ಕಿ ಅರಸು ಕಂಬಳದ ಗೌತಮ್ ಜೈನ್, ಸ್ಕೖವ್ ರತ್ನಾಕರ್, ಕೋಣಗಳ ಯಜಮಾನರುಗಳಾದ ಮಾಳ ದಿನೇಶ್ ಶೆಟ್ಟಿ ಮತ್ತು ತ್ರಿಶಾಲ್ ಕೆ. ಪೂಜಾರಿ ಚಚೆ೯ಯಲ್ಲಿ ಪಾಲ್ಗೊಂಡಿದ್ದರು.
ಅಸೋಸಿಯೇಶನ್ ನ ಪ್ರಮುಖರಾದ ಪಿ.ಆರ್ ಶೆಟ್ಟಿ, ಮುಚ್ಚೂರು ಲೋಕೇಶ್ ಶೆಟ್ಟಿ, ವಿಜಯ ಕುಮಾರ್ ಕಂಗಿನ ಮನೆ ಮತ್ತು ಚಂದ್ರಹಾಸ ಸನಿಲ್ ಉಪಸ್ಥಿತರಿದ್ದರು.





0 Comments