ವೀರರಾಣಿ ಅಬ್ಬಕ್ಕ ಜನ್ಮಸ್ಥಳದಲ್ಲಿ ಮಿಟ್ಟಿ ಕಳಸ ಯಾತ್ರೆಗೆ ಚಾಲನೆ
ಮೂಡುಬಿದಿರೆ: ಅಬ್ಬಕ್ಕ ಸ್ವಾಭಿಮಾನದ ಪ್ರತೀಕ. ಅಬ್ಬಕ್ಕಳ ಜೀವನ, ಸಾಧನೆ ಶಾಶ್ವತವಾಗಿರಬೇಕು. ಈ ನಿಟ್ಟಿನಲ್ಲಿ ಎಬಿವಿಪಿ, ಜವನೆರ್ ಬೆದ್ರದಂತಹ ಯುವ ಸಂಘಟನೆಗಳು ಮುಂಚೂಣಿಯಲ್ಲಿ ಪ್ರಯತ್ನಿಸುತ್ತಿರುವುದು ಅಭಿನಂದನಾರ್ಹ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ನುಡಿದರು.
ಅವರು ಚೌಟರ ರಾಣಿ ಅಬ್ಬಕ್ಕನ 500ನೇ ಜನ್ಮಶತಮಾನೋತ್ಸವದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ವಿಭಾಗದ ವತಿಯಿಂದ ನಡೆಯುವ ವೀರ ರಾಣಿ ಅಬ್ಬಕ್ಕ ಜನ್ಮಸ್ಥಳದಿಂದ ಮಿಟ್ಟಿ ಕಳಸ ಯಾತ್ರೆಗೆ ಮೂಡುಬಿದಿರೆ ಚೌಟರ ಅರಮನೆ ಬಳಿಯ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಶನಿವಾರ ನಡೆದ ಕಾಯ೯ಕ್ರಮವನ್ನು ಉದ್ಘಾಟಿಸಿ ಆಶೀವ೯ಚನ ನೀಡಿದರು. ಅಬ್ಬಕ್ಕಳ ಈಗಾಗಲೇ 96 ಕಾರ್ಯಕ್ರಮಗಳು ಯಶಸ್ವಿಯಾಗಿ ಆಯೋಜಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಆಕೆಯ ವಿಚಾರ ಪಸರಿಸಲು ಮಿಟ್ಟಿ ಕಳಸ ಯಾತ್ರೆ ಪೂರಕವಾಗಿದೆ ಎಂದರು.
ಚೌಟರ ಅರಮನೆಯ ಕುಲದೀಪ ಎಂ. ಅವರು ಮಣ್ಣು ಹಾಗೂ ಜಲವನ್ನು ಎಬಿವಿಪಿಯ ಪ್ರಮುಖರಿಗೆ ಹಸ್ತಾಂತರಿಸುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಶಾಸಕ ಉಮಾನಾಥ ಎ.ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಅಪ್ರತಿಮ ರಾಷ್ಟ್ರಪ್ರೀತಿಯನ್ನು ಹೊಂದಿದ್ದ ಅಬ್ಬಕ್ಕಳ ವಿಚಾರವನ್ನು ಕೇವಲ ತುಳುನಾಡಿಗೆ ಸೀಮಿತಗೊಳಿಸದೆ, ಇಡೀ ದೇಶದಲ್ಲಿ ಆಕೆಯ ಪರಿಚಯವಾಗಬೇಕು. ಎಬಿವಿಪಿಯ ಅಭಿಯಾನ ಈ ನಿಟ್ಟಿನಲ್ಲಿ ಪೂರಕ ಎಂದರು.
ಎಬಿವಿಪಿ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಡಾ.ರವಿ ಮಂಡ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಡೀ ರಾಜ್ಯದಲಿ ಅಬ್ಬಕ್ಕಳ ರಥಯಾತ್ರೆಯನ್ನು ಆಯೋಜಿಸಿ ಸುಮಾರು 6 ಲಕ್ಷದಷ್ಟು ವಿದ್ಯಾರ್ಥಿಗಳನ್ನು ತಲುಪಲು ಯಶಸ್ವಿಯಾಗಿದ್ದೇವೆ. ತುಳುನಾಡಿನ ವೀರರಾಣಿಗೆ ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಸಿಕ್ಕಿರುವ ಗೌರವ ಅಪಾರ. ರಾಷ್ಟ್ರಮಟ್ಟದಲ್ಲಿ ಯುವ ಸಮೂಹದ ಗಮನಸೆಳೆಯುವ ನಿಟ್ಟಿನಲ್ಲಿ ಡೆಹಾರಡೂನ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಎಬಿವಿಪಿ ಸಮಾವೇಶದಲ್ಲಿ ಇಲ್ಲಿಂದ ಕೊಂಡೊಯ್ಯುವ ಮಿಟ್ಟಿ,ಕಳಸವನ್ನು ಇರಿಸಿ, ಅಬ್ಬಕ್ಕಳ ಯಶೋಗಾಥೆಯನ್ನು ಸಾರಲಿದ್ದೇವೆ. ನ.24ರಂದು ರೈಲಿನ ಮೂಲಕ ಸಾಗುವಾಗ ವಿವಿಧ ರಾಜ್ಯಗಳಲ್ಲಿನ ಎಬಿವಿಪಿ ಕಾರ್ಯಕರ್ತರು ಈ ಕಳಸವನ್ನು ಸ್ವಾಗತಿಸಲಿದ್ದಾರೆ ಎಂದರು.
ಜವನೆರ್ ಬೆದ್ರ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಉದ್ಯಮಿ ಅಜಯ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕೇಶವ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನಿಶಾ ಶೆಟ್ಟಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಎಬಿವಿಪಿ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಪ್ರವೀಣ್ ಎಚ್.ಕೆ ವಂದಿಸಿದರು.




0 Comments