ಹಿರಿಯ ಯಕ್ಷಗಾನ ಕಲಾವಿದ ಬೋಳ ದುಗ್ಗಪ್ಪ ಆಚಾರ್ಯ ನಿಧನ
ಮೂಡುಬಿದಿರೆ: ಹಿರಿಯ ಯಕ್ಷಗಾನ ಕಲಾವಿದ ಹಾಗೂ ಕಾಷ್ಠ ಶಿಲ್ಪಿ ಬೋಳ ದುಗ್ಗಪ್ಪ ಆಚಾರ್ಯ (72) ಅವರು ಬುಧವಾರ ಬೆಳುವಾಯಿಯ ಅಂತಬೆಟ್ಟುವಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ನಿಧನರಾದರು. ಅವರು ಪತ್ನಿಯನ್ನು ಅಗಲಿದ್ದಾರೆ.
ಮೂಲತಃ ಕಾರ್ಕಳ ತಾಲೂಕಿನ ಬೋಳ ಅವರು ಕೆಲ ಸಮಯದಿಂದ ತಮ್ಮ ಸಂಬಂಧಿ, ಪತ್ರಕರ್ತ ಬಿ. ಸೀತಾರಾಮ ಆಚಾರ್ಯ ಅವರ ಮನೆಯಲ್ಲಿ ವಾಸವಾಗಿದ್ದರು.
ಅವರು ಕೇವಲ ಯಕ್ಷಗಾನ ಕಲಾವಿದರಾಗಷ್ಟೇ ಅಲ್ಲದೆ, ಕ್ಲಿಷ್ಟಕರವಾದ ಮರದ ಮೇಲ್ಛಾವಣಿ ಕೆತ್ತನೆಗಳ ಕಾಷ್ಠ ಶಿಲ್ಪಿಯಾಗಿಯೂ ಪ್ರಸಿದ್ಧರಾಗಿದ್ದರು. ಯಕ್ಷಗಾನದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು, ತಾಳಮದ್ದಲೆಯಲ್ಲಿ ಅರ್ಥಧಾರಿಯಾಗಿಯೂ ಜನಪ್ರಿಯರಾಗಿದ್ದರು. ಹಲವಾರು ಪ್ರಸಂಗಗಳನ್ನು ರಚಿಸಿದ್ದರು.
ಯಕ್ಷಗುರುವಾಗಿ ಅಪಾರ ಕೊಡುಗೆ ನೀಡಿದ ಅವರು, ಮುಂಡ್ಕೂರು, ಸಚ್ಚೇರಿಪೇಟೆ, ವಂಜಾರಕಟ್ಟೆ, ಮೂಡುಬಿದಿರೆ ಸೇರಿದಂತೆ ಹಲವೆಡೆ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ತರಬೇತಿಯನ್ನು ನೀಡಿದ್ದರು. ಮುಂಡ್ಕೂರು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಖಾಯಂ ಕಲಾವಿದರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಅವರ ಸೇವೆಗಾಗಿ ಕಿನ್ನಿಗೋಳಿ ಯುಗಪುರುಷ ಸಹಿತ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
ಮೃತರ ಅಂತ್ಯಕ್ರಿಯೆಯು ಬೆಳುವಾಯಿ ಅಂತಬೆಟ್ಟುವಿನಲ್ಲಿ ನಡೆಯಲಿದೆ.
0 Comments