ಬಗೆಹರಿಯದ ಕೆಂಪು ಕಲ್ಲು, ಮರಳು ಸಮಸ್ಯೆ - ಬಿಜೆಪಿಯಿಂದ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ದಿನಪೂರ್ತಿ ಪ್ರತಿಭಟನಾ ಧರಣಿ

ಜಾಹೀರಾತು/Advertisment
ಜಾಹೀರಾತು/Advertisment

 ಬಗೆಹರಿಯದ ಕೆಂಪು ಕಲ್ಲು, ಮರಳು ಸಮಸ್ಯೆ -  ಬಿಜೆಪಿಯಿಂದ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ದಿನಪೂರ್ತಿ ಪ್ರತಿಭಟನಾ ಧರಣಿ

ಮೂಡುಬಿದಿರೆ : ದ.ಕ. ಜಿಲ್ಲೆಯಲ್ಲಿ ಇನ್ನೂ ಬಗೆಹರಿಯದ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧ ಎದುರು ಮಂಗಳವಾರ ದಿನಪೂರ್ತಿ ಪ್ರತಿಭಟನಾ ಧರಣಿ ನಡೆಯಿತು.

ಕೆಂಪು ಕಲ್ಲು, ಮರಳು, ಖಾಲಿ ಚಟ್ಟಿ, ಗಾರೆಗಳನ್ನು ಬಿಜೆಪಿ ಮುಖಂಡರು ಹಾಗೂ ಜನಪ್ರತಿನಿಧಿಗಳು ಪ್ರದರ್ಶಿಸುವ ಮೂಲಕ ಕೆಂಪು ಕಲ್ಲು, ಮರಳು ಸಮಸ್ಯೆ ಕೂಡಲೇ ಇತ್ಯರ್ಥಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.


ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಕರಾವಳಿ ಹಿಂದುತ್ವದ ಭದ್ರಕೋಟೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕೆಂಪು ಕಲ್ಲು ಮತ್ತು ಮರಳಿನ ಕೃತಕ ಅಭಾವ ಸೃಷ್ಟಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಪೀಕರ್‌ಗೆ ಇಲ್ಲಿನ ಜ್ವಲಂತ ಸಮಸ್ಯೆ ಗೊತ್ತಿದ್ದರೂ ಸಮಸ್ಯೆಗೆ ಪರಿಹಾರ ಹುಡುಕು ಕೆಲಸ ಆಗಿಲ್ಲ. ಬಿಜೆಪಿ ಶಾಸಕರು, ಸಂಸದರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎರಡು ವಾರ ಕಳೆದರೂ ಸರ್ಕಾರದಿಂದ ಸ್ಪಂದನ ಸಿಕ್ಕಿಲ್ಲ. ಕೆಂಪು ಕಲ್ಲು ಮತ್ತು ಮರಳಿಗಾರಿಕೆಯ ನಿಯಮ ಸರಳೀಕೃತಗೊಳಿಸಲು ಇನ್ನು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದರು. ಈ ಎಲ್ಲ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಹಿತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಪೀಕರ್ ಯು.ಟಿ.ಖಾದರ್ ನೇರ ಜವಾಬ್ದಾರಿ ಎಂದು ಆರೋಪಿಸಿದರು.


ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕೆಂಪು ಕಲ್ಲು ಮತ್ತು ಮರಳಿನ ಸಮಸ್ಯೆಯಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಆಗಮಿಸಿದರೂ ಶಾಸಕರ ಸಭೆ ಕರೆದಿಲ್ಲ. ಹಾಗಾಗಿ ಮಂಗಳೂರಿನಿಂದ ಬಿ.ಸಿ.ರೋಡ್, ಸುಳ್ಯಕ್ಕೆ ಪಾದಯಾತ್ರೆ ನಡೆಸುವ ಎಚ್ಚರಿಕೆಯನ್ನು ನೀಡಿದರು.


ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಈಗ ಕೆಂಪು ಕಲ್ಲು, ಮರಳು ಕೊರತೆ ವರೆಗೆ ಸರ್ಕಾರದಿಂದ ಸಮಸ್ಯೆಗಳ ಸೃಷ್ಟಿಯಾಗುತ್ತಿದೆ. ಎರಡು ವಾರಗಳಲ್ಲಿ ೨೫೦

ಪರವಾನಿಗೆ ನೀಡಿ ಮರಳು ಸಮಸ್ಯೆ ಇತ್ಯರ್ಥಗೊಂಡಿದೆ ಎಂದು ತಪ್ಪಾಗಿ ಹೇಳುತ್ತಿದ್ದಾರೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸ್ಪೀಕರ್ ಅವರು ಜಿಲ್ಲೆಯ ಕಾರುಭಾರು ನಡೆಸುತ್ತಿದ್ದರೂ ಈ ಸಮಸ್ಯೆಯನ್ನು ಸರಿಪಡಿಸುವ ಬದಲು ಉಲ್ಭಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.


ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕರಾವಳಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ಕೆಂಪು ಕಲ್ಲು, ಮರಳು ಕಟ್ಟಡ ಕಾಮಗಾರಿಗಳಿಗೆ ಸಿಗುತ್ತಿಲ್ಲ. ಇಲ್ಲಿ ಕೆಂಪು ಕಲ್ಲು ಬಳಸಿಯೇ ಕಾಮಗಾರಿ ನಡೆಸುವುದರಿಂದ ಈಗ ಕಾರ್ಮಿಕರೂ ಕೆಲಸ ಇಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಬಿಜೆಪಿ ನಿಯೋಗ ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರ ಕಂಡಿಲ್ಲ. ಇದಕ್ಕೆ ನೇರ ಉಸ್ತುವಾರಿ ಸಚಿವರಂತೆ ವರ್ತಿಸುವ ಸ್ಪೀಕರ್ ಯು.ಟಿ.ಖಾದರ್ ಕಾರಣವಾಗಿದ್ದು, ತ್ವರಿತವಾಗಿ ಸ್ಪಂದಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.


 ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಶೀಘ್ರ ಇತ್ಯರ್ಥಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಅಲ್ಲದೆ ಮಂಗಳೂರಿನಿಂದ ಬಿ.ಸಿ.ರೋಡ್ ಮೂಲಕ ಸುಳ್ಯಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂಬ  ಎಚ್ಚರಿಕೆಯನ್ನೂ ಪ್ರತಿಭಟನನಿರತರು ನೀಡಿದರು.


ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಭಾಗೀರಥಿ, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಕ್ಯಾ.ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಸಂಜಯ ಪ್ರಭು, ರಮೇಶ್ ಕಂಡೆಟ್ಟು, ಪೂರ್ಣಿಮಾ, ವಿಹಿಂಪ ಮುಖಂಡ ಎಚ್. ಕೆ. ಪುರುಷೋತ್ತಮ ಜೋಗಿ ಮೊದಲಾದವರಿದ್ದರು.

Post a Comment

0 Comments