ಶ್ರೀ ಕ್ಷೇತ್ರ ಧರ್ಮಸ್ಥಳ ಕೋಟ್ಯಾಂತರ ಭಕ್ತರ ಶ್ರದ್ದಾಕೇಂದ್ರ-ಅಪಚಾರ ಸಹಿಸಲ್ಲ:ಕೋಟ
ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಕೇಂದ್ರ ಅಲ್ಲ. ಕೋಟ್ಯಾಂತರ ಜನರಿಗೆ ಉಪಯುಕ್ತವಾಗುವ ನೂರಾರು ಯೋಜನೆಗಳನ್ನು ನೀಡಿದ ಹೆಮ್ಮೆಯ ಶ್ರದ್ಧಾಕೇಂದ್ರ. ಸಾವಿರಾರು ದೇವಸ್ಥಾನಗಳ ಪುನರುತ್ಥಾನ, ಸ್ಮಶಾನಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿ, ವ್ಯಸನಮುಕ್ತ ಚಳುವಳಿ, ಸ್ವ-ಸಹಾಯ ಕೇಂದ್ರಗಳು ಸೇರಿದಂತೆ ಅನನ್ಯ ಕೊಡುಗೆ ನೀಡಿದ ಧರ್ಮಸ್ಥಳಕ್ಕೆ ಅಪಚಾರ ಆಗುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಕ್ಷೇತ್ರದ ಭಕ್ತರಾದ ನಾವು ಸಹಿಸಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ದೆಹಲಿಯಲ್ಲಿ ಮಾಧ್ಯಮ ಮಿತ್ರರಲ್ಲಿ ಮಾತನಾಡಿದ ಸಂಸದರು ಅನ್ಯ ರಾಜ್ಯದ ರಾಜಕೀಯ ನಾಯಕರಿಗೆ ಧರ್ಮಸ್ಥಳದ ವಿಚಾರದಲ್ಲಿ ಏನು ಕೆಲಸ? ಇದು ಷಡ್ಯಂತ್ರ ಅಲ್ಲದೆ ಮತ್ತೇನು? ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಸ್ಪಷ್ಟ ಹಾಗೂ ಪಾರದರ್ಶಕ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣ, ಯೂಟ್ಯೂಬರ್ಸ್ ಹಾಕುವ ಸುಳ್ಳು ಸುದ್ದಿಗಳಿಂದ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಇಂತಹಾ ನಡೆಗಳಿಗೆ ಕಡಿವಾಣ ಹಾಕಬೇಕು. ಎಸ್ಐಟಿ ತನಿಖೆಯನ್ನು ನಾವು ಸ್ವಾಗತಿಸಿದ್ದೇವೆ ಮತ್ತು ಗೌರವಿಸುತ್ತೇವೆ. ಆದರೆ ಅದರ ಮಧ್ಯೆ ಸೋಷಿಯಲ್ ಮೀಡಿಯಾ ತಾನೇ ಒಂದು ತನಿಖಾ ಸಂಸ್ಥೆ ಎಂಬಂತೆ ನಡೆದುಕೊಳ್ಳುವುದು ದುರದೃಷ್ಟಕರ. ಈ ವಿಚಾರವಾಗಿ ಗೃಹ ಇಲಾಖೆ ಸ್ಪಷ್ಟ ನಿಲುವು ತಾಳಬೇಕೆಂದು ಆಗ್ರಹಿಸುತ್ತೇನೆ.
ಹಿಂದೂ ಧಾರ್ಮಿಕ ಕ್ಷೇತ್ರದ ಪರವಾಗಿ ನಿಲ್ಲುವುದು ನಮ್ಮ ಜವಬ್ದಾರಿ ಎಂದು ಹೇಳಿದರು.
0 Comments