ಜಿಲ್ಲಾ ಪತ್ರಕತ೯ರ ಸಂಘದ ಸುವಣ೯ ಮಹೋತ್ಸವ
*ಡಾ. ಆಳ್ವರಿಗೆ ಸುವರ್ಣ ಸಂಭ್ರಮ ಗೌರವ ಪ್ರಶಸ್ತಿ
ಮೂಡುಬಿದಿರೆ : ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆಗೆ ಮಾಜಿ ಮುಖ್ಯಮಂತ್ರಿ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಾಧ್ಯಮಗಳು ವಸ್ತು ನಿಷ್ಠವಾಗಿ, ನಿಷ್ಪಕ್ಷಪಾತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದರೆ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಮಾಧ್ಯಮ ಒಂದು ವಿಚಾರದ ಪರ ಮಾತ್ರ ಇರಬಾರದು, ವಾಸ್ತವಿಕ ಸಂಗತಿಗಳನ್ನು ಸಮಾಜದ ಮುಂದಿಡಬೇಕು. ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಆಗುತ್ತಿರುವುದು ಖೇದಕರ.ಈ ವಿಚಾರಗಳು ಪತ್ರಕರ್ತರ ಸುವರ್ಣ ಸಂಭ್ರಮದ ವೇಳೆ ವಿಮರ್ಶೆಯಾಗಬೇಕು. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮಕ್ಕೆ ನಿಯಂತ್ರಣ ಇರುತ್ತದೆ. ಆದರೆ ಸಾಮಾಜಿಕ ಮಾಧ್ಯಮಗಳಿಗೆ ಯಾವುದೇ ಹತೋಟಿ ಇಲ್ಲದೆ ದುರ್ಬಳಕೆಯಾಗುತ್ತಿರುವುದು ಖೇದಕರ ಎಂದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾಧ್ಯಮ ಬಿಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಎನ್ಆರ್ಐ ಉದ್ಯಮಿ ಝಕರಿಯಾ ಜೋಕಟ್ಟೆ ಸಾಕ್ಷ್ಯ ಚಿತ್ರ ಅನಾವರಣಗೊಳಿಸಿದರು.
ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಅದಾನಿ ಗ್ರೂಪ್ನ ಉಪಾಧ್ಯಕ್ಷ ಕಿಶೋರ್ ಆಳ್ವ, ಮಾಜಿ ಮೇಯರ್ ಕೆ.ದಿವಾಕರ ಮುಖ್ಯ ಅತಿಥಿಯಾಗಿದ್ದರು.
ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಆಶಯ ಭಾಷಣ ಮಾಡಿದರು, ಮಾಜಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಸಂಘ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
ಸುವರ್ಣ ಮಹೋತ್ಸವದ ಅಂಗವಾಗಿ ಪ್ರತಿಷ್ಠಿತ ಸುವರ್ಣ ಸಂಭ್ರಮ ಗೌರವ ಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಸ್ತುತ ಹಾಗೂ ಭವಿಷ್ಯದ ಮಾಧ್ಯಮ..
ಈ ಸಂದರ್ಭದಲ್ಲಿ ನಡೆದ ’ಪ್ರಸ್ತುತ ಹಾಗೂ ಭವಿಷ್ಯದ ಮಾಧ್ಯಮ’ ವಿಚಾರಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಬಿ.ರವೀಂದ್ರ ಶೆಟ್ಟಿ ಮತ್ತು ವಾಲ್ಟರ್ ನಂದಳಿಕೆ ವಿಷಯ ಮಂಡಿಸಿದರು. ಹಿರಿಯ ಪತ್ರಕರ್ತ ರವಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಮಾಧ್ಯಮ ಅಕಾಡೆಮಿ ಮಾಜಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಅಬುದಾಬಿ ಉದ್ಯಮಿ ಜಯರಾಮ ರೈ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಆನಂದ ಜಿ ಪೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಅನ್ನು ಮಂಗಳೂರು, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಉಪಸ್ಥಿತರಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಸುವರ್ಣ ಸಂಭ್ರಮ ಸಮಿತಿಯ ಪ್ರಧಾನ ಸಂಚಾಲಕ ಪಿ.ಬಿ. ಹರೀಶ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ಇರಾ ಪ್ರಾರ್ಥಿಸಿದರು.
ಛಾಯಾಚಿತ್ರ ಸ್ಪರ್ಧೆ ವಿಜೇತರು..
ಸುವರ್ಣ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಹುಬ್ಬಳ್ಳಿಯ ಕನ್ನಡ ಪ್ರಭ ಪತ್ರಿಕೆಯ ಛಾಯಾಗ್ರಾಹಕ ಈರಪ್ಪ ನಾಯ್ಕರ್ (ಪ್ರ), ಮೈಸೂರಿನ ಕನ್ನಡಪ್ರಭ ಪತ್ರಿಕೆಯ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ದ್ವಿ) ಹಾಗೂ ಮೈಸೂರಿನ ದ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರಿನ್ಸಿಪಾಲ್ ಫೋಟೋಗ್ರಾಪರ್ ಉದಯಶಂಕರ್ (ತೃ) ಅವರಿಗೆ ಬಹುಮಾನ ವಿತರಿಸಲಾಯಿತು.
0 Comments