ಆರೋಗ್ಯವೇ ಮಹಾಭಾಗ್ಯ- ಡಾ.ವಿನಯ್ ಕುಮಾರ್ ಹೆಗ್ಡೆ
ಮೂಡುಬಿದಿರೆ : “ಮನುಷ್ಯನಿಗೆ ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರಿಲ್ಲ. ದೇಹದ ಪ್ರತಿಯೊಂದು ಅಂಗವೂ ಕೂಡ ಆರೋಗ್ಯ ಪೂರ್ಣವಾಗಿದ್ದಾಗ ಮನುಷ್ಯ ಲವಲವಿಕೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯ. ಹಲ್ಲಿನ ಬಗ್ಗೆಯೂ ಕಾಳಜಿ ಅತೀ ಮುಖ್ಯ, ನಿರ್ಲಕ್ಷ ಸಲ್ಲದು” ಎಂದು ಖ್ಯಾತ ದಂತ ವೈದ್ಯ ಡಾ. ವಿನಯ ಕುಮಾರ್ ಹೆಗ್ಡೆ ಅಭಿಪ್ರಾಯ ಪಟ್ಟರು. ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ‘ಮಕ್ಕಳು ಬಾಲ್ಯದಲ್ಲಿ ಹಲ್ಲು ಮತ್ತು ಒಸಡುಗಳ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು. ದಿನ ನಿತ್ಯದ ದಂತ ಆರೈಕೆಯು ಬಾಯಿಯ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಮಾತನಾಡುತ್ತಾ “ವೈದ್ಯೋ ನಾರಾಯಣೋ ಹರಿ” ಎಂಬ ಉಕ್ತಿಗೆ ಬದ್ಧರಾಗಿದ್ದುಕೊಂಡು ಡಾ.ವಿನಯ ಕುಮಾರ್ ಹೆಗ್ಡೆ ಅವರು ಮೂಡಬಿದಿರೆಯ ಜನತೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರಲ್ಲಿರುವ ಕಾಳಜಿ, ನಿಸ್ವಾರ್ಥ ಸೇವಾ ಮನೋಭಾವ ಮುಂತಾದ ಮಾನವೀಯ ಮೌಲ್ಯಗಳು ಇಂದು ಅವರನ್ನು ವೃದ್ಧ, ತರುಣರೆಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ನೆಚ್ಚಿನ ವೈದ್ಯರನ್ನಾಗುವಂತೆ ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ವೈದ್ಯರ ಮಹತ್ವವನ್ನು ಮಕ್ಕಳಿಗೆ ಹೇಳಿ ‘ವೈದ್ಯರ ದಿನಾಚರಣೆ’ ಆಚರಣೆಯ ಅಗತ್ಯತೆಯನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ವಿನಯ ಕುಮಾರ್ ಹೆಗ್ಡೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವೈದ್ಯರ ಮಹತ್ವದ ಸಂದೇಶವನ್ನು ಸಾರುವ ಹಲವು ಚಟುವಟಿಕೆಗಳ ಮೂಲಕ ಮಕ್ಕಳೇ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯ ಜಯಶೀಲ ಹಾಗೂ ಶಿಕ್ಷಕಿ ಜಯಲಕ್ಷೀ ಉಪಸ್ಥಿತರಿದ್ದರು.
0 Comments