ಬಿಜೆಪಿ ನಾಯಕರ ನಡೆಗೆ ಹಿರಿಯರ ಬೇಸರ-ನಡೆಸಿಕೊಳ್ಳುವ ರೀತಿ ಬದಲಾಗಲಿ:ಮಹೇಶ್ ಠಾಕೂರ್ ಅಭಿಮತ

ಜಾಹೀರಾತು/Advertisment
ಜಾಹೀರಾತು/Advertisment

 ಬಿಜೆಪಿ ನಾಯಕರ ನಡೆಗೆ ಹಿರಿಯರ ಬೇಸರ-ನಡೆಸಿಕೊಳ್ಳುವ ರೀತಿ ಬದಲಾಗಲಿ:ಮಹೇಶ್ ಠಾಕೂರ್ ಅಭಿಮತ

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ರವರನ್ನು ದಿಢೀರ್ ಬದಲಾವಣೆ ಮಾಡಿದ ಕುರಿತು ಅನೇಕ ಅಸಮಧಾನ ವ್ಯಕ್ತವಾಗಿದ್ದು ಪಕ್ಷ ಕಾರ್ಯಕರ್ತರನ್ನು ನಡೆಸಿಕೊಳ್ಳುವ ರೀತಿ ಬದಲಾಗಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈ ನಡುವೆ ಕಳೆದ ವರ್ಷ ಬಿಜೆಪಿಯಿಂದ ಉಚ್ಚಾಟನೆಗೊಂಡ ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಮಹೇಶ್ ಠಾಕೂರ್ ರವರು ಪಕ್ಷದ ಬಗ್ಗೆ ಸುಧೀರ್ಘ ಲೇಖನ ಬರೆದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 



ಬಿಜೆಪಿ ಬೆಳೆದಂತೆ ಕೆಲವೊಂದು ನ್ಯೂನತೆಗಳು ಕಾರ್ಯಕರ್ತರನ್ನು ಹಿಂಡುತ್ತಿದೆ. ಬಿಜೆಪಿ ಕಾರ್ಯಕರ್ತರೆಂದರೆ ಹಣ, ಹೆಂಡಕ್ಕಾಗಿ ಬರುವ ಬಾಡಿಗೆ ಗಿರಾಕಿಗಳಲ್ಲ. ಸಂಘದ ಗರಡಿಯಲ್ಲಿ ಪಳಗಿ ದೇಶ ಮೊದಲೆಂಬ ಮಂತ್ರವನ್ನು ಜಪಿಸುತ್ತಾ ಬಂದ ನಿಷ್ಠರು. ಹೀಗೆ ಬರುವಾಗ ಅವರಲ್ಲಿ ಸ್ವಾಭಾವಿಕವಾಗಿ ಸ್ವಾಭಿಮಾನ ಅನ್ನೋದು ಬಳುವಳಿಯಾಗಿ ಬಂದುಬಿಡುತ್ತೆ.


ಇತ್ತೀಚಿನ ಕೆಲವು ಘಟನೆಗಳು, ನಾಯಕರ ವರ್ತನೆಗಳು ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರಿಗೆ ಕಸಿವಿಸಿ ಉಂಟು ಮಾಡಿದ್ದು ಸತ್ಯ. ಕಿಶೋರ್ ಕುಮಾರ್ ಕುಂದಾಪುರ ಎಂಬ ಪ್ರಾಮಾಣಿಕ ವ್ಯಕ್ತಿಯನ್ನು ಹೇಳದೆ ಕೇಳದೆ ಉಡುಪಿ ಜಿಲ್ಲೆಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಪಕ್ಷದ ಎಲ್ಲಾ ಕಾರ್ಯಕರ್ತರು ಈ ಆಯ್ಕೆಯನ್ನು ಒಪ್ಪಿಕೊಂಡರು. ಪಕ್ಷದ ಆಯ್ಕೆಯ ಬಗ್ಗೆ ಯಾರೊಬ್ಬರೂ ಮರು ಮಾತಾಡಲಿಲ್ಲ. ಆದರೆ ಈಗ ಏಕಾಏಕಿ ಅವರನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಯಿತು. ಏಕೆ? ಏಕೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಗೊತ್ತಿಲ್ಲ ಎಂಬ ಉತ್ತರ ಸ್ವತಃ ಕಿಶೋರ್ ಕುಮಾರ್ ರವರ ಸ್ವಾಭಿಮಾನವನ್ನು ಕೆಣಕದಿರಲು ಸಾಧ್ಯವೇ? ಅವರ ಅವಧಿಯಲ್ಲಿ ನಡೆದ ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಪಕ್ಷ ಸಂಘಟನೆ ನಡೆಯುತ್ತಿದೆ. ಮತ್ಯಾಕೆ ಪದಚ್ಯುತಿ? 


ಮಾಜಿ ಶಾಸಕರಾದ ಕೆ ರಘುಪತಿ ಭಟ್, ಲಾಲಾಜಿ ಮೆಂಡನ್ ಸಹಿತವಾಗಿ ಪಕ್ಷದ ಅನೇಕ ನಾಯಕರನ್ನು ಪಕ್ಷದ ನಾಯಕರು ನಡೆಸಿಕೊಂಡ ರೀತಿಯಲ್ಲಿ ಬಹಳಷ್ಟು ತಪ್ಪು ಕಾಣುತ್ತದೆ. ರಘುಪತಿ ಭಟ್ ರವರು ಶಾಸಕರಾಗಿ ಅಗಾಧ ಸೇವೆಯನ್ನು ಜನತೆಗೆ ನೀಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಉಡುಪಿ ನಂಬರ್ ಒನ್ ಇತ್ತು. ಅಟಲ್ ಟ್ರೋಫಿ, ಬೂತ್ ಪ್ರಮುಖರ ಸಮಾವೇಶ, ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವುದು ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಸಂಘಟಿಸಿದ್ದರು. ಇಷ್ಟೆಲ್ಲಾ ಆದಾಗಲೂ ಹೇಳದೆ ಕೇಳದೆ ಅವರಿಗೆ ಟಿಕೆಟ್ ವಂಚಿಸಲಾಯಿತು. ಹೊಸಮುಖಕ್ಕೆ ಅವಕಾಶ ಕೊಟ್ಟಿದ್ದರಲ್ಲಿ ಯಾರಿಗೂ ಬೇಜಾರಿಲ್ಲ. ಆದರೆ ಅಷ್ಟು ಕಾಲ ಆಡಳಿತ ನಡೆಸಿದ ಅವರಲ್ಲಿ ಕನಿಷ್ಠ ಒಂದು ಮಾತು ಕೇಳದೆ ಈ ನಿರ್ಧಾರ ಎಷ್ಟು ಸರಿ? ಆದರೆ ತಮ್ಮ ಒಂದಷ್ಟು ಬೇಸರವನ್ನು ಹೇಳಿಕೊಂಡು ಮತ್ತೆ ಅವರು ಪಕ್ಷದ ಕೆಲಸಕ್ಕೆ ಜಿಗಿದರು. ಹೊಸ ಅಭ್ಯರ್ಥಿಯ ಪರವಾಗಿ ಗಲ್ಲಿ ಗಲ್ಲಿ ಸುತ್ತಿ ಪ್ರಚಾರ ಮಾಡಿದರು. ಒಂದು ವೇಳೆ ಅವರು ಅಂದು ಬಂಡಾಯ ಸಾರುತ್ತಿದ್ದರೆ ಬಿಜೆಪಿ ಗೆಲ್ಲಲು ಸಾಧ್ಯವೇ ಇರುತ್ತಿರಲಿಲ್ಲ. ಆದರೆ ಅವರು ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಿದರು. ಅವರಿಗೆ‌ ಪರಿಷತ್ ಟಿಕೆಟ್ ನೀಡುವ ಭರವಸೆ ನೀಡಲಾಯಿತು. ಕೊನೆಗೆ ಅದೂ ಇಲ್ಲಾದಾಯಿತು. ಈಗ ಅವರು ಉಡುಪಿಯಲ್ಲಿ ಪಕ್ಷಕ್ಕೆ ನೀಡಿದ ಕೊಡುಗೆಗೆ ಬೆಲೆ ಇಲ್ಲದಂತಾಯಿತು.


ಲಾಲಾಜಿ ಮೆಂಡನ್ ಕೂಡಾ ಉತ್ತಮ ವ್ಯಕ್ತಿ. ಅವರ ಸೇವೆ ಕೂಡಾ ಬಹಳಷ್ಟಿದೆ. ಅವರಿಗೂ ಒಂದು ಮಾತು ಹೇಳದೆ ಟಿಕೆಟ್ ವಂಚಿಸಲಾಯಿತು. ಆದರೂ ಅವರನ್ನು ಈಗ ಅಲ್ಲಿನ ಹೊಸ ಶಾಸಕರು ಅಷ್ಟೇ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಅವರ ಸ್ವಾಭಿಮಾನಕ್ಕಾದ ಪೆಟ್ಟು ಸರಿಪಡಿಸಲು ಸಾಧ್ಯವೇ?


ನಳಿನ್ ಕುಮಾರ್ ಕಟೀಲುರವರು ಸಂಘದ ಶಿಸ್ತಿನ ಸಿಪಾಯಿ, ಎಂಪಿ ಆದ್ರು, ರಾಜ್ಯಾಧ್ಯಕ್ಷರೂ ಆದ್ರು. ಅಂತಹಾ ವ್ಯಕ್ತಿಗೆ ಟಿಕೆಟ್ ತಪ್ಪಿಸಿದಾಗ ಹೇಗೆ ನಡೆಸಿಕೊಂಡಿರಿ? ಸ್ವತಃ ಅಮಿತ್ ಶಾ ರವರೇ ಅವರ ಮರು ಆಯ್ಕೆ ಆಗಬೇಕೆನ್ನುವಾಗ ಹೈಕಮಾಂಡ್ ಎದೆಯಲ್ಲಿ ಕುಳಿತು ಟಿಕೆಟ್ ತಪ್ಪಿಸಿ ಅವರಿಗೆ ಮಾಹಿತಿಯನ್ನೇ ನೀಡದೆ ಅವಮಾನ ಮಾಡಿದ್ದು ಎಷ್ಟು ಸರಿ? ಪ್ರತಾಪ್ ಸಿಂಹ ಎಂತಹಾ ಡೈನಾಮಿಕ್ ಲೀಡರ್. ರಾಜ್ಯದೆಲ್ಲೆಡೆ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ನಾಯಕ ಬೆಳೆಯುವ ಹಂತದಲ್ಲೇ ಚಿವುಟಿ ಬಿಟ್ರು. ನಿಮಗೆ ಟಿಕೆಟ್ ಇಲ್ಲ ಎಂದ ಕೂಡಲೇ ಮರು ಮಾತಾಡದೆ ಚುನಾವಣಾ ನಿವೃತ್ತಿ ತೆಗೆದುಕೊಂಡ ಈಶ್ವರಪ್ಪಂತಹ ಪಕ್ಷನಿಷ್ಠರನ್ನು ನಮ್ಮ ನಾಯಕರು ಯಾವರೀತಿ ನಡೆಸಿಕೊಂಡರು? ಅನೇಕ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡ ಇಂತಹಾ ನಾಯಕರನ್ನು ಕಳೆದುಕೊಂಡ ಪರಿಣಾಮ ಏನಾಗುತ್ತದೆ ಎಂಬುದನ್ನು ಯೋಚಿಸಿದ್ದಾರಾ?


ಪಕ್ಷದ ನಾಯಕರು ಬದಲಾಗಬೇಕು. ರಾಜ್ಯದಲ್ಲಿ ನಾಯಕತ್ವ ಸರಿಯಾಗೋವರೆಗೆ ಬಿಜೆಪಿಗೆ ಉಳಿಗಾಲ ಇಲ್ಲ. ಒಳ್ಳೊಳ್ಳೆ ನಾಯಕರನ್ನು ಹೇಳದೆ ಕೇಳದೆ ದೂಡಿಬಿಟ್ಟರೆ ಕಾರ್ಯಕರ್ತರ ಯೋಚನೆಗಳೂ ಬದಲಾಗುತ್ತದೆ. ಯುವ ಪಡೆ ಆಯ್ಕೆ ಮಾಡುವ ಏಕೈಕ ಪಕ್ಷ ಬಿಜೆಪಿ. ಆದರೆ ಇಂತಹ ಪಕ್ಷದಲ್ಲಿ ಇಂತಹ ನಡವಳಿಕೆ ಕಂಡಾಗ ಯುವಕರು ರಾಜಕಾರಣದಿಂದ ವಿಮುಖರಾಗುವ ಸಾಧ್ಯತೆ ಇದೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಅದರಲ್ಲಿ ಎರಡು ಮಾತಿಲ್ಲ. ಆದರೆ ವ್ಯಕ್ತಿ ಸಂಪನ್ಮೂಲಗಳನ್ನು ಕಳೆದುಕೊಂಡರೆ ಪಕ್ಷಕ್ಕೆಲ್ಲಿ ಕಿಮ್ಮತ್ತು? ಇಂದು ನರೇಂದ್ರ ಮೋದಿ ಎಂಬ ವ್ಯಕ್ತಿಯಿಂದ ತಾನೇ ದೇಶದಲ್ಲಿ ಬಿಜೆಪಿ ಎದೆಯುಬ್ಬಿಸಿ ನಿಂತಿದ್ದು! ಹೀಗಾಗಿ ನಾಯಕರು ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಆಗ ಪಕ್ಷ ಮತ್ತೆ ಬೆಳೆಯುತ್ತದೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಶ್ಯಾಮ್ ಪ್ರಸಾದ್ ಮುಖರ್ಜಿಯವರು ಕಂಡ ಕನಸು ನನಸಾಗುತ್ತದೆ.


-ಮಹೇಶ್ ಠಾಕೂರ್ ಉಡುಪಿ

Post a Comment

0 Comments