ಬ್ರಹ್ಮಾವರ ಅಪಘಾತ ವಲಯದಲ್ಲಿ ತುರ್ತು ಕ್ರಮಕ್ಕೆ ಸಂಸದ ಕೋಟ ಸೂಚನೆ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯನ್ನು ಭೇಟಿ ಮಾಡಿದ ಸಂಸದ ಕೋಟ

ಜಾಹೀರಾತು/Advertisment
ಜಾಹೀರಾತು/Advertisment

 ಬ್ರಹ್ಮಾವರ ಅಪಘಾತ ವಲಯದಲ್ಲಿ ತುರ್ತು ಕ್ರಮಕ್ಕೆ ಸಂಸದ ಕೋಟ ಸೂಚನೆ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯನ್ನು ಭೇಟಿ ಮಾಡಿದ ಸಂಸದ ಕೋಟ

ಬ್ರಹ್ಮಾವರವೂ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಯ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ (R.O.) ವಿ.ಪಿ. ಬ್ರಾಂಹಣಕರ್ ರವರನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಬೆಂಗಳೂರಿನಲ್ಲಿ ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಬ್ರಹ್ಮಾವರದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದು ಈ ಹಿನ್ನೆಲೆಯಲ್ಲಿ ತುರ್ತಾಗಿ ರಸ್ತೆ ಇಕ್ಕೆಲಗಳಲ್ಲಿ ಭದ್ರಗಿರಿ ಜಂಕ್ಷನ್ ನಿಂದ ಉಪ್ಪಿನಕೋಟೆಯವರೆಗೆ ಸರ್ವಿಸ್ ರೋಡ್ ಮಾಡುವುದಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮಕ್ಷಮದಲ್ಲಿ ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಆದರೂ ಕಾಮಗಾರಿಯನ್ನೇ ಪ್ರಾರಂಭ ಮಾಡದಿರುವ ಬಗ್ಗೆ ಪ್ರಾದೇಶಿಕ ಅಧಿಕಾರಿಯವರಿಗೆ ಸಂಸದ ಕೋಟ ಮಾಹಿತಿ ಒದಗಿಸಿದರು. ಮತ್ತು ಬ್ರಹ್ಮಾವರದ ಮೇಲ್ಸೇತುವೆಗಾಗಿ ಯೋಜನಾ ವರದಿಯನ್ನು ತುರ್ತಾಗಿ ತಯಾರಿಸಿ ಕೇಂದ್ರಕ್ಕೆ ಕಳಿಸುವಂತೆ ಸಂಸದ ಕೋಟ ಆಗ್ರಹಿಸಿದರು.


ಹೆಜಮಾಡಿಯಿಂದ ಪ್ರಾರಂಭವಾಗಿ ಕುಂದಾಪುರದವರೆಗೆ ಈಗಾಗಲೇ ಆಗಿರುವ 15 ಕಿ.ಮೀ. ಸರ್ವಿಸ್ ರಸ್ತೆಯನ್ನು ಹೊರತುಪಡಿಸಿ ಮತ್ತೆ 42 ಕಿ.ಮೀ. ಹೊಸ ಸರ್ವಿಸ್ ರಸ್ತೆಗಳ ನಿರ್ಮಾಣದ ಅವಶ್ಯಕತೆಗಳನ್ನು ವಿವರಿಸಿ ವಿಸ್ತೃತವಾದ ಯೋಜನಾ ವರದಿಯನ್ನು ತಯಾರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಕಳಿಸುವಂತೆ ಸೂಚನೆ ನೀಡಿದರು.


ಈ ಎಲ್ಲಾ ವಿವರಗಳನ್ನು ಕೇಳಿದ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಯವರು ತಾನು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ಹಾಗೂ ವಿಳಂಬವಿಲ್ಲದೆ ಸರ್ವಿಸ್ ರಸ್ತೆಯನ್ನು ನಿರ್ಮಿಸುವುದಾಗಿಯೂ ಸಂಸದರಿಗೆ ಭರವಸೆ ನೀಡಿದರು. ಮೇಲ್ಸೇತುವೆ ಮತ್ತು ಹೆಜಮಾಡಿ ಮತ್ತು ಕುಂದಾಪುರದವರೆಗಿನ ಸರ್ವಿಸ್ ರಸ್ತೆಯ ಯೋಜನಾ ವರದಿಯನ್ನು ತಯಾರಿಸಿ ಒಂದು ವಾರದ ಒಳಗೆ ಕೇಂದ್ರಕ್ಕೆ ಕಳುಹಿಸಿ ಕೊಡುವುದಾಗಿ ಸಂಸದರಿಗೆ ಬ್ರಾಹ್ಮಕರ್ ಭರವಸೆ ನೀಡಿದರು.


ಈ ಬಗ್ಗೆ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿಯವರಿಗೂ ಪತ್ರದ ಮುಖೇನ ಮಾಹಿತಿಯನ್ನು ನೀಡಿದ್ದು ಪತ್ರದ ಸಾರಾಂಶವನ್ನು ಹಾಗೂ ಅದರ ಪ್ರತಿಯನ್ನು ಪ್ರಾದೇಶಿಕ ಅಧಿಕಾರಿ ಬ್ರಾಂಹಣಕರ್ ರವರಿಗೆ ಸಂಸದ ಕೋಟ ನೀಡಿದರು. ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸಂಸದರ ಜೊತೆಗೆ ಉಪಸ್ಥಿತರಿದ್ದರು.

Post a Comment

0 Comments