ಸಂಸದರಾದರೂ ಗ್ರಾಮ ಪಂಚಾಯತಿ ಹಿತವನ್ನು ಮರೆಯದ ಕೋಟ:ಪಂಚಾಯತ್ ನೌಕರರಿಗಾಗಿ ಕೇಂದ್ರ ಸಚಿವರ ಬೆನ್ನುಬಿದ್ದ ಸಂಸದರು
ನವದೆಹಲಿ:ಗ್ರಾಮ ಪಂಚಾಯತ್ ಸದಸ್ಯರ ಮತಗಳಿಂದ ಕರ್ನಾಟಕ ಮೇಲ್ಮನೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಧ್ವನಿಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಇದೀಗ ಸಂಸದ ಸ್ಥಾನವನ್ನು ಅಲಂಕರಿಸಿದ ನಂತರವೂ ಗ್ರಾಮ ಪಂಚಾಯತಿ ಹಾಗೂ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಧ್ವನಿಯೆತ್ತುವ ಕೆಲಸವನ್ನು ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯದ 5,995 ಗ್ರಾಮ ಪಂಚಾಯತ್‌ಗಳೂ ಸೇರಿದಂತೆ, ಭಾರತ ದೇಶದಲ್ಲಿ 2,55,401 ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 16,77,005 ಮಂದಿ ಪಂಚಾಯತ್ ಸಿಬ್ಬಂದಿಗಳು ದುಡಿಯುತ್ತಿದ್ದು, ಸದರಿ ಸಿಬ್ಬಂದಿಗಳಿಗೆ ಇ.ಎಸ್.ಐ ( ಆರೋಗ್ಯ ವಿಮೆ) ಸೌಲಭ್ಯ ಸಿಗುತ್ತಿಲ್ಲ ಎಂಬ ಕೊರಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಬಡವರ ಮಧ್ಯೆ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ನೀರುಗಂಟಿ, ಜಾಡಮಾಲಿ, ವಾಟರ್ ಮೆನ್, ಕಂಪ್ಯೂಟರ್ ಆಪರೇಟರ್, ಜವಾನ ಸೇರಿದಂತೆ, 10 ಕ್ಕಿಂತ ಕಡಿಮೆ ಸಿಬ್ಬಂದಿಗಳಿರುವುದರಿಂದ ಈಗಿರುವ ನಿಯಮದಂತೆ, ಸದ್ರಿ ಸಿಬ್ಬಂದಿಗಳು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದು, ಸಂಕಷ್ಟ ಪಡುತ್ತಿದ್ದಾರೆ.
ಆದ್ದರಿಂದ ಮಾನವೀಯ ನೆಲೆಯಲ್ಲಿ ಕೇಂದ್ರ ಸರಕಾರ, ಎಲ್ಲಾ ರಾಜ್ಯಗಳಿಂದ ಮಾಹಿತಿಯೊಂದಿಗೆ ವರದಿ ಪಡೆದು, ಪಂಚಾಯತ್ ಸಿಬ್ಬಂದಿಗಳಿಗೂ ಇಎಸ್ಐ ಸೌಲಭ್ಯ ನೀಡಿ, ಬಡ ಸಿಬ್ಬಂದಿಗಳ ಕುಟುಂಬಕ್ಕೆ ನೆರವಾಗಬೇಕೆಂದು ಕೇಂದ್ರ ಕಾರ್ಮಿಕ ಸಚಿವರಾದ ಡಾ. ಮನ್ಸುಕ್ ಮಾಂಡವೀಯ ರವರನ್ನು ಭೇಟಿ ಮಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿದ ಸಚಿವರು, ಇಲ್ಲಿಯವರೆಗೆ ನನ್ನ ಗಮನ ಬಂದಿರಲಿಲ್ಲ. ಈ ಬಗ್ಗೆ ಅಗತ್ಯ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಸಂಸದ ಕೋಟ ಜೊತೆಯಲ್ಲಿ ಬಾಗಲಕೋಟೆ ಲೋಕಸಭಾ ಸದಸ್ಯ ಶ್ರೀ ಪಿ.ಸಿ ಗದ್ದಿಗೌಡರ್ ಉಪಸ್ಥಿತರಿದ್ದರು.
0 Comments