ಹಂಡೇಲಿನಲ್ಲಿ ಕೇರಳ ಮಾದರಿಯ ದುರಂತಕ್ಕೆ ಆಹ್ವಾನ ನೀಡುತ್ತಿದೆ ಅನಧಿಕೃತ ಲೇಔಟ್ : ಪುತ್ತಿಗೆ ಗ್ರಾಮಸಭೆಯಲ್ಲಿ ಸ್ಥಳೀಯರ ಆರೋಪ
ಮೂಡುಬಿದಿರೆ: ಹಂಡೇಲಿನಲ್ಲಿ ಕೃಷಿ ಭೂಮಿಯನ್ನು ಅನಧಿಕೃತವಾಗಿ ನಿವೇಶನವಾಗಿ ಅಭಿವೃದ್ಧಿ ಪಡಿಸುತ್ತಿದ್ದು ಅಲ್ಲಿದ್ದ ದೈವಸ್ಥಾನ, ಕೆರೆಗಳನ್ನು ಮುಚ್ಚಿ ಪಾಕ್ ೯ ಉದ್ದೇಶಕ್ಕಾಗಿ ಮಣ್ಣು ರಾಶಿ ಹಾಕಲಾಗಿದ್ದು ಇದು ಮಳೆಗಾಲದಲ್ಲಿ ಕೇರಳ ಮಾದರಿಯ ದುರಂತಕ್ಕೆ ಎಡೆಮಾಡಿಕೊಡಲಿದೆ ಎಂದು ಆರೋಪಿಸಿ ಈ ಬಗ್ಗೆ ಸಂಬಂಧ ಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ ಘಟನೆ ಪುತ್ತಿಗೆ ಗ್ರಾಮಸಭೆಯಲ್ಲಿ ನಡೆದಿದೆ.
ಪುತ್ತಿಗೆ ಗ್ರಾ.ಪಂಚಾಯತ್ ಅಧ್ಯಕ್ಷೆ ರಾಧ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪಂಚಾಯತ್ ಸಭಾಭವನದಲ್ಲಿ ನಡೆದ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಸ್ಥಳೀಯರಾದ ಅಬ್ದುಲ್ ಹಮೀದ್ ಮತ್ತು ಹಸನ್ ಬಾವಾ ಅವರು ಸಮಸ್ಯೆಯ ಬಗ್ಗೆ ಗ್ರಾಮ ಆಡಳಿತಾಧಿಕಾರಿಯವರ ಗಮನಕ್ಕೆ ತಂದರು.
ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚಚಿ೯ಸಿ ಸಂಭಾವ್ಯ ಪರಿಸ್ಥಿತಿಯ ಬಗ್ಗೆ ವಿವರಿಸಿ ತಹಸೀಲ್ದಾರ್ ಅವರಿಗೆ ಈ ಮೊದಲೇ ಪತ್ರ ಬರೆಯಲಾಗಿದ್ದು, ಇದೀಗ ಮತ್ತೊಮ್ಮೆ ಪತ್ರ ಬರೆದು ಗಮನ ಸೆಳೆಯಲಾಗುವುದು ಎಂದು ಪಿಡಿಓ ಭೀಮಾ ನಾಯಕ ಬಿ. ತಿಳಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಷ್ಟು ಅನಧಿಕೃತ ಮತ್ತು ಅನಧಿಕೃತ ಕೋರೆಗಳಿವೆ ಎಂಬುದನ್ನು ಕಂದಾಯ ಅಧಿಕಾರಿಗಳು ಮಾಹಿತಿ ನೀಡುವಂತೆ ಗ್ರಾಮಸ್ಥರಾದ ರಾಜೇಶ್ ಕಡಲಕೆರೆ ಕೇಳಿದಾಗ ಉತ್ತರಿಸಿದ ವಿ.ಎ ಅವರು ತಾವು ಗಣಿ ಇಲಾಖೆಗೆ ಪತ್ರ ಬರೆದು ಮಾಹಿತಿ ಕೇಳಿದ್ದೇವೆ ಆದರೆ ಈವರೆಗೆ ಮಾಹಿತಿ ಸಿಕ್ಕಿಲ್ಲವೆಂದಾಗ, ಕೋರೆಗಳ ಬಗ್ಗೆ ಯಾರಾದರೂ ದೂರು ನೀಡಿದಾಗ ಬಂದು ದಾಳಿ ಮಾಡುವ ಗಣಿ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಗೆ ಯಾಕೆ ಬರುವುದಿಲ್ಲ. ಅವರು ಅಧಿಕೃತವಾಗಿ ನಡೆಸುವ ಕೋರೆಗಳಿಗೆ ದಾಳಿ ನಡೆಸಿ ಹೆದರಿಸುತ್ತಾರೆ ಅದರೆ ಅನಧಿಕೃತವಾಗಿ ರಾಜಾರೋಷವಾಗಿ ನಡೆಸುವ ಕೋರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದ ಅವರು ಅವರಿಗೆ ಲೆಟರ್ ಬರೆದು ಹೇಳಿ ಗ್ರಾಮಸಭೆಗೆ ಬರದಿದ್ದರೆ ತಾವು ರೈಡ್ ಮಾಡಲೂ ಬರುವುದೂ ಬೇಡವೆಂದರು.
ತಾನು ಮಣ್ಣು ಮಾರಾಟ ಮಾಡಿ ಸಂಬಂಧಪಟ್ಟ ಇಲಾಖೆಗೆ ರೂ 2 ಕೋಟಿ ಕಟ್ಟುತ್ತಿದ್ದೇನೆ ಇದರಲ್ಲಿ ರೂ 1 ಕೋ. ಸರಕಾರಕ್ಕೆ ಹೋಗುತ್ತದೆ. 50 ಲಕ್ಷ ಜಿ. ಪಂಗೆ ಹೋಗುತ್ತದೆ, 50 ಲಕ್ಷ ಪಂಚಾಯತ್ ಗೆ ಹೋಗುತ್ತದೆ. ಅದರಂತೆ ಕಳೆದ 25 ವಷ೯ಗಳಿಂದ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅನಧಿಕೃತ ಕೋರೆಗಳ ಪಂಚಾಯತ್ ಹೋರಾಟ ಮಾಡಿ ಪಡೆದುಕೊಳ್ಳುವಂತ್ತಾಗಲಿ ಎಂದು ಮಾಜಿ ವಾಸುದೇವ ನಾಯಕ್ ಸಲಹೆ ನೀಡಿದರು.
ಗ್ರಾಮಸಭೆಗೆ ಬಾರದಿರುವ ಗಣಿ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಬರೆಯುವುದೆಂದು ಸಭೆಯಲ್ಲಿ ನಿಣ೯ಯಿಸಲಾಯಿತು.
ಹಂಡೇಲಿನ ವರಂಕಿ, ಪುತ್ತಿಗೆಯ ಕಂಚಿಬೈಲಿನಲ್ಲಿ ನೀರಿನ ಸಮಸ್ಯೆಯಿದ್ದು ಟ್ಯಾಂಕ್ ಮೂಲಕವಾದರೂ ಮನೆಮನೆಗೆ ನೀರನ್ನು ತಲುಪಿಸುವಂತೆ ಗ್ರಾಮಸ್ಥರಾದ ಹಸನ್ ಮತ್ತು ರಾಮ ಅವರು ಸಭೆಯಲ್ಲಿ ಆಗ್ರಹಿಸಿದರು. ಪರಿಶೀಲನೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಪಿಡಿಓ ತಿಳಿಸಿದರು.
ಪಾಲಡ್ಕ-ಗುಂಡ್ಯಡ್ಕ-ಕಲ್ಲಮುಂಡ್ಕುರು ಸಂಪಕಿ೯ಸುವ ರಸ್ತೆಯ ಬದಿ ಗುಡ್ಡ ಜರಿದು ರಸ್ತೆಗೆ ಬಿದ್ದು ಬಸ್ಸು ಓಡಾಡಲು, ಶಾಲಾ ಮಕ್ಕಳಿಗೆ ಕಷ್ಟವಾಗುತ್ತಿದೆ ಎಂದು ಪಂಚಾಯತ್ ಸದಸ್ಯೆ ಮೆಟಿಲ್ಡಾ ಖಡೋ೯ಜಾ ಹೇಳಿದರು.
ಖಾಸಗಿ ಬಸ್ ಮಾಲಕ ವಿನಯ್ ಡೇಸಾ ಮಾತನಾಡಿ ಈ ಭಾಗದಲ್ಲಿ ತನ್ನ ಬಸ್ಸು ಓಡಾಡುತ್ತಿದೆ. ಗುಡ್ಡ ಜರಿದು ರಸ್ತೆಗೆ ಮಣ್ಣು ಬೀಳುತ್ತಿರುವುದರಿಂದ ಪುತ್ತಿಗೆ ದೇವಸ್ಥಾನ-ಪಾಲಡ್ಕ-ಗುಂಡ್ಯಡ್ಕ-ಕಲ್ಲಮುಂಡ್ಕೂರು-ಕಟೀಲು ಭಾಗದಲ್ಲಿ ಓಡಾಡುತ್ತಿರುವ ತನ್ನ ಬಸ್ಸಿಗೆ ಬದಲಿ ವ್ಯವಸ್ಥೆ ಇಲ್ಲದಿರುವುದರಿಂದ ಬಸ್ಸು ಸೇವೆಯನ್ನು ನಿಲ್ಲಿಸಬೇಕಾಗುತ್ತದೆ ಇದರಿಂದಾಗಿ ಗ್ರಾಮಸ್ಥರು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಮಳೆಗಾಲ ಆರಂಭವಾಗುವ ಮೊದಲೇ ಈ ಮಾಗ೯ವನ್ನು ಸರಿಪಡಿಸುವಂತೆ ಕೋರಿಕೆ ಪತ್ರ ಸಲ್ಲಿಸಿದರು.
ಗುಡ್ಡ ಜರಿಯುವುದನ್ನು ತಡೆಯಲು ಸದೃಢವಾದ ತಡೆಗೋಡೆ ನಿಮಿ೯ಸಲಾಗುವುದೆಂದು ಭೀಮಾ ನಾಯಕ ತಿಳಿಸಿದರು.
ಸಿಸಿ ಟಿವಿ ಅಳವಡಿಸಿದಲ್ಲಿಯೇ ಕಸದ ರಾಶಿ ಬಿಸಾಡಿ ಹೋಗುತ್ತಿರುವವರಿಗೆ ಶಿಕ್ಷೆ ನೀಡುವಂತೆ ಗ್ರಾಮಸ್ಥ ರೋಶನ್ ತಿಳಿಸಿದರು. ಶಿಕ್ಷೆ ನೀಡುವ ಅಧಿಕಾರ ನಮಗಿಲ್ಲ ಆದರೆ ದಂಡ ವಿಧಿಸಲು ಅವಕಾಶವಿದೆ ಎಂದು ಪಿಡಿಓ ಸ್ಪಷ್ಟ ಪಡಿಸಿದರು. ಈ ಹಿಂದೆ ಪೊಲೀಸರ ಸಹಕಾರದೊಂದಿಗೆ ಕಸ ಬಿಸಾಡುವವರನ್ನು ಹಿಡಿದು ಕ್ರಮಕೈಗೊಳ್ಳಲಾಗಿತ್ತು. ಆದ್ದರಿಂದ ಪೊಲೀಸ್ ಮತ್ತು ಪಂಚಾಯತ್ ಜಂಟಿ ಕಾಯ೯ಚರಣೆ ಮಾಡಬೇಕೆಂದು ಮಾಜಿ ಸದಸ್ಯ ನಾಗವಮ೯ ಜೈನ್, ವಾದಿರಾಜ್ ಭಟ್ ಸಲಹೆ ನೀಡಿದರು.
ವಿವಿಧ ಫಲಾನುಭವಿಗಳ ಸಹಾಯಧನದ ಚೆಕ್ ವಿತರಿಸಲಾಯಿತು.
ಅರಣ್ಯ, ಆರೋಗ್ಯ, ಮೆಸ್ಕಾಂ, ಬ್ಯಾಂಕ್ ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೖಲಾ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷ ದಯಾನಂದ ಮತ್ತು ಸದಸ್ಯರು ಚಚೆ೯ಯಲ್ಲಿ ಪಾಲ್ಗೊಂಡಿದ್ದರು.
--------------------
ಪುತ್ತಿಗೆ ಯನ್ನು 'ಮುಡಾ' ದಿಂದ ಕೈ ಬಿಡಲು ಸರಕಾರ ಕ್ಕೆ ಪತ್ರ : ಪಿಡಿಓ ಸ್ಪಷ್ಟನೆ
ಮೂಡುಬಿದಿರೆ ಪುರಸಭೆಯ ವ್ಯಾಪ್ತಿಗೆ ಸಂಬಂಧಪಡಬೇಕಾಗಿರುವ ಮೂಡುಬಿದಿರೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬದಿಯಲ್ಲಿರುವ ನಮ್ಮ ಪುತ್ತಿಗೆ ಮತ್ತು ಇತರ ಗ್ರಾಮಗಳನ್ನು ಸೇರಿಸಿದ್ದಾರೆ. ಈ ಯೋಜನೆಗೆ ಮೂಡುಬಿದಿರೆಯ ಜನಸಂಖ್ಯೆ ಸಾಲದಿರುವುದರಿಂದ ಹತ್ತಿರದ ಗ್ರಾಮಗಳನ್ನು ಸೇರಿಸಿದ್ದಾರೆ. ಮಹಾ ನಕ್ಷೆಯು ಅಂಗೀಕಾರವಾಗಿದೆ ನೋಟಿಫಿಕೇಟಿನ್ ಮಾತ್ರ ಆಗಲು ಬಾಕಿಯಿದೆ ಇದರಿಂದ ಪುತ್ತಿಗೆ ಗ್ರಾಮಕ್ಕೆ ಭಾರೀ ಅನ್ಯಾಯವಾಗಲಿದೆ ಇದರ ವಿರುದ್ಧ ಪಕ್ಷಬೇಧ ಮರೆತು ಹೋರಾಡದಿದ್ದರೆ ನಾವೆಲ್ಲಾ ಹೊಂಡಕ್ಕೆ ಬಿದ್ದ ಹಾಗೆಯೇ ಎಂದು ಗ್ರಾಮಸಭೆಯಲ್ಲಿ ರಾಜೇಶ್ ಕಡಲಕೆರೆ ಎಚ್ಚರಿಸಿದರು.
ಈ ಬಗ್ಗೆ ಪಂಚಾಯತ್ ಯಾವುದೇ ನಿಣ೯ಯ ಮಾಡಿಲ್ಲ. ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಆಕ್ಷೇಪನದ ನಿಣ೯ಯ ಮಾಡಿ ಮಹಾದೊಳಗಿರುವ ಪುತ್ತಿಗೆ ವ್ಯಾಪ್ತಿಯನ್ನು ಹೊರಗಿಟ್ಟು ಸಮಸ್ಯೆಯನ್ನು ಬಗೆಹರಿಸುವಂತೆ ಸರಕಾರಕ್ಕೆ ಮನವಿ ಪತ್ರ ಬರೆಯಲಾಗುವುದೆಂದು ಪಿಡಿಓ ಭೀಮಾ ಬಿ ನಾಯಕ್ ತಿಳಿಸಿದರು
---------------=----
0 Comments