ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನ

ಜಾಹೀರಾತು/Advertisment
ಜಾಹೀರಾತು/Advertisment

 ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನ


ಮೂಡುಬಿದಿರೆ : ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನ ಮತ್ತು ಜೈವಿಕ ವಿಜ್ಞಾನ ವಿಲೀನಗೊಂಡು ಸಂಶೋಧನಾ ಅಧ್ಯಯನ ನಡೆಸಲು ಪೂರಕ ವಾತವರಣ ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಣಿಪಾಲ ಕೆಎಂಸಿಯ ಔಷಧಶಾಸ್ತ್ರ ವಿಭಾಗದ ಸಂಶೋಧನಾ ಸಹಾಯಕಿ ಡಾ. ರಮ್ಯಾ ಕಟೀಲ್ ಹೇಳಿದರು.  


  ಅವರು ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಜೈವಿಕ ವಿಜ್ಞಾನ ವಿಭಾಗ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇದರ ಸಹಯೋಗದೊಂದಿಗೆ  ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ "ಜೈವಿಕ ವಿಜ್ಞಾನಗಳಲ್ಲಿ ಇತ್ತೀಚಿನ ಪ್ರಗತಿಗಳು ಮತ್ತು ನಾವೀನ್ಯತೆಗಳು" ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವೈಜ್ಞಾನಿಕ ವಿಚಾರ ಸಂಕಿರಣವು ಸಂಶೋಧನಾರ್ಥಿಗಳಿಗೆ ಸೃಜನಾತ್ಮಕ ಜ್ಞಾನ, ವಿಚಾರ ವಿನಿಮಯ ಮತ್ತು ಅಧ್ಯಯನದಲ್ಲಿ ಪಾಲ್ಗೊಳ್ಳಲು ಸಹಕಾರಿ ಎಂದರು.  

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇಲ್ಲಿನ ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮಿಕಾಂತ, ಸಂಶೋಧನಾ ಪ್ರಬಂಧಗಳನ್ನು ತಯಾರಿಸುವ ಸಂದರ್ಭಗಳಲ್ಲಿ ಹಲವಾರು ಬಾರಿ ನಿರಾಕರಣೆಯಾಗುವ ಸಂಭವ ಎದುರಾಗಬಹುದು. ಪರಿಶ್ರಮ ಮತ್ತು ಸ್ಥಿರತೆಯಿಂದ ಅಧ್ಯಯನವನ್ನು ಪೂರ್ಣಗೊಳಿಸಿ. ಪ್ರತಿ ಅಧ್ಯಯನದಲ್ಲಿಯೂ ಕುತೂಹಲ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ. ಜೀವನದ ಪ್ರತಿ ಹಂತವನ್ನು ಸವಾಲಾಗಿ ಸ್ವೀಕರಿಸಿ, ಯಶಸ್ಸನ್ನು ಪಡೆಯಿರಿ ಎಂದರು.  

ಕಾರ್ಯಕ್ರಮದಲ್ಲಿ ಅಧಿಕೃತ ಸಂಶೋಧನಾ ಲೇಖನಗಳ ಪುಸ್ತಕದ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.

ನಂತರ ನಡೆದ ವಿವಿಧ ವಿಷಯವಾರು ಅಧಿವೇಶನಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮಿಕಾಂತ,  ಬೆಂಗಳೂರು ನ್ಯೂಟ್ರೇಸ್‌ನ  ಎಲೆಕ್ಟ್ರೋ ಕೆಮಿಸ್ಟ್ರಿ ವಿಭಾಗದ ಪ್ರಧಾನ ಸಂಶೋಧಕಿ ಡಾ ಹರ್ಷಿತಾ ಬಿ ಎ  ಹಾಗೂ ಮಂಗಳೂರಿನ ಎ.ಜೆ ವೈದ್ಯಕೀಯ ಕಾಲೇಜಿನ ಜೀವ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಪ್ರಿಯಾಂಕಾ ಶ್ರೀಧರನ್‌ ಅವರಿಂದ ಉಪನ್ಯಾಸ ನಡೆಯಿತು.

ಆಳ್ವಾಸ್ ಕಾಲೇಜು ಮತ್ತು ವಿವಿಧ ಕಾಲೇಜಿನ ಜೈವಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ 'ಜೈವಿಕ ವಿಜ್ಞಾನಗಳಲ್ಲಿ ಇತ್ತೀಚಿನ ಪ್ರಗತಿಗಳು ಮತ್ತು ನಾವೀನ್ಯತೆಗಳು' ಕುರಿತ ಮೌಖಿಕ ಪ್ರಸ್ತುತಿ ಮತ್ತು ಪೋಸ್ಟರ್ ಪ್ರಸ್ತುತಿ ನೆರವೇರಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ  ಡಾ.ಕುರಿಯನ್, ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಹಾಗೂ ಸಂಚಾಲಕ ಡಾ. ರಾಮ ಭಟ್ ಪಿ ಇದ್ದರು.   ವಿದ್ಯಾರ್ಥಿನಿ ಸಹನಾ ಪೂಜಾರಿ ಕಾಯ೯ಕ್ರಮ ನಿರೂಪಿಸಿದರು. ಅನಿಕೇತ ಸುಧೀರ್ ವಂದಿಸಿದರು.

Post a Comment

0 Comments