ಫೆಬ್ರವರಿ ೨೮ - ಮಾರ್ಚ್ ೭ ರವರೆಗೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶ

ಜಾಹೀರಾತು/Advertisment
ಜಾಹೀರಾತು/Advertisment

 ಫೆಬ್ರವರಿ ೨೮ - ಮಾರ್ಚ್ ೭ ರವರೆಗೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶ

ಮೂಡುಬಿದಿರೆ: ೮೦೦ ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಸೋಮನಾಥೇಶ್ವರ ದೇವಸ್ಥಾನವನ್ನು ಸುಮಾರು ೧೫ ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಿಸಿದ್ದು, ಫೆಬ್ರವರಿ ೨೮ರಿಂದ ಮಾರ್ಚ್ ೭ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಕುಲದೀಪ ಎಂ ತಿಳಿಸಿದರು.


 ಅವರು ಬುಧವಾರ ಕ್ಷೇತ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 

ಫೆಬ್ರವರಿ ೨೮ ರಂದು ಮೂಡುಬಿದಿರೆ ಅರಮನೆ ಬಾಗಿಲಿನಿಂದ ಶ್ರೀ ಕ್ಷೇತ್ರದ ವರೆಗೆ ಬೃಹತ್ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಇದರೊಂದಿಗೆ ಸ್ವರ್ಣ ಶಿರೋಕಲಶ, ದೈವದ ಮಂಚವನ್ನು ಬರಮಾಡಿಕೊಳ್ಳಲಾಗುವುದು. ಮಾರ್ಚ್ ೨ ರಂದು ಶಿಖರ ಪ್ರತಿಷ್ಠೆ, ಸೋಮನಾಥೇಶ್ವರ ದೇವರ ಲಿಂಗ ಪ್ರತಿಷ್ಠೆ, ಮಾರ್ಚ್ ೬ ರಂದು ಬ್ರಹ್ಮಕಲಶಾಭಿಶೇಕ ನಡೆಯಲಿದೆ.


ದೇವಳದ ಜೀರ್ಣೋದ್ಧಾರ ಕೆಲಸಗಳು ಅಂತಿಮ ಹಂತದಲ್ಲಿದೆ. ಶಿಲಾಮಯ ಸೋಮನಾಥೇಶ್ವರ, ಹಾಗೂ ಮಹಿಷಮರ್ದಿನಿ, ಗಣಪತಿ ಗುಡಿಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರಕ್ಕೆ ಎರಡು ಮುಖ್ಯ ಪ್ರವೇಶ ದ್ವಾರ, ದಕ್ಷಿಣ ಮತ್ತು ಉತ್ತರಕ್ಕೆ ಪ್ರತ್ಯೇಕ ಬಾಗಿಲುಗಳನ್ನು ನಿರ್ಮಿಸಲಾಗಿದೆ. ಶಿಲಾ ಶಿಲ್ಪದ ಕೆಲಸವನ್ನು ಎಲ್ಲೂರು ವಿಷ್ಣುಮೂರ್ತಿ ಭಟ್ ಮತ್ತು ಕಾಷ್ಠಶಿಲ್ಪದ ಕೆಲಸವನ್ನು ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ ನಿರ್ವಹಿಸಿದ್ದಾರೆ. ಸಪರಿವಾರ ಸಹಿತ ಪಂಚಧೂಮಾವತಿ ದೈವದ ಪ್ರತಿಷ್ಠಾ ಕಾರ್‍ಯ ನೆರವೇರಿದೆ.

ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸುಮಾರು ೧ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಸುಮಾರು ೧೫ ಎಕ್ರೆ ಪ್ರದೇಶದಲ್ಲಿ ಎರಡು ಸಾವಿರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಸಂಪಿಗೆಯಲ್ಲಿ ನೂತನವಾಗಿ ನಿರ್ಮಿಸಿದ ಸ್ವಾಗತ ಗೋಪುರದ ಉದ್ಘಾಟನೆ ನಡೆಯಲಿದೆ. ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್‍ಯಕ್ರಮಗಳಿಗಾಗಿ ತಿರುಮಲರಾಯ ಚೌಟ ವೇದಿಕೆ, ಚೌಟ ರಾಣಿ ಅಬ್ಬಕ್ಕದೇವಿ ವೇದಿಕೆ, ಅಡಿಗಳ್ ಶ್ರಿನಿವಾಸ ಭಟ್ ವೇದಿಕೆಗಳನ್ನು ನಿರ್ಮಿಸಿದ್ದು ಈ ವೇದಿಕೆಗಳಲ್ಲಿ ಎಲ್ಲಾ ದಿನಗಳಲ್ಲಿ ಸಾಂಸ್ಕ್ರತಿಕ ಕಾರ್‍ಯಕ್ರಮಗಳು ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೀಣೋದ್ಧಾರ ಸಮಿತಿಯ ಉಪಾಧ್ಯಕ್ಷ ಕುಂಗೂರು ಚಾವಡಿಮನೆ ಶಿವಪ್ರಸಾದ್ ಆಚಾರ್, ಜತೆ ಕಾರ್‍ಯದರ್ಶಿ ಕೆ ಶ್ರೀಪತಿ ಭಟ್, ವಿದ್ಯಾ ರಮೇಶ ಭಟ್, ವಾದಿರಾಜ ಮಡ್ಮಣ್ಣಾಯ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್‍ಯಾಧ್ಯಕ್ಷ ನೀಲೇಶ್ ಶೆಟ್ಟಿ, ಉಪಾಧ್ಯಕ್ಷ ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.

Post a Comment

0 Comments