ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಮುಚ್ಚಲಿದೆ ಸಂಪರ್ಕ ರಸ್ತೆ
*ಅಂಡಾರ್ ಪಾಸ್ ಗೆ ಆಗ್ರಹಿಸಿ ಸಾರ್ವಜನಿಕರಿಂದ ಇಂದು ಪ್ರತಿಭಟನೆ
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಅಲಂಗಾರು ಜಂಕ್ಷನ್‌ನಿಂದ ಕಾನ, ಅಂಬೂರಿಯಿಂದ ಪೊಯ್ಯೆದಪಲ್ಕೆ ಪರಿಸರಕ್ಕೆ ಸಂಪರ್ಕಿಸುವ ರಸ್ತೆಯು ಮುಚ್ಚುವ ಹಂತದಲ್ಲಿದ್ದು ಇದರಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ತೊಂದರೆಯನ್ನು ಅನುಭವಿಸುವ ಆತಂಕದಲ್ಲಿದ್ದಾರೆ.
ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟಿಯ ಹೆದ್ದಾರಿ ಕಾಮಗಾರಿಯು ನಡೆಯುತ್ತಿದೆ. ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಾಲೋನಿ ಇದ್ದು, ಈ ರಸ್ತೆಯ ಮೂಲಕ ಅವರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ದಿನವೂ ಆಟೋ, ದ್ವಿಚಕ್ರವಾಹನಗಳು ನೂರಾರು ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುತ್ತಿದೆ. ಕಾನ, ಅಂಬೂರಿ ಮಾತ್ರವಲ್ಲದೆ ಕರಿಯನಂಗಡಿ ಮೂಲಕ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಕಾಂತಾವರಕ್ಕೂ ಹೋಗಲು ಶಾರ್ಟ್ಕಟ್ ರಸ್ತೆ ಇದಾಗಿದೆ. ಆದರೆ ಈ ರಸ್ತೆಗೆ ಅಡ್ಡವಾಗಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿದ್ದು, ಇದರಿಂದ ಅಲಂಗಾರು ಜಂಕ್ಷನ್-ಪೊಯ್ಯೆದಪಲ್ಕೆ ರಸ್ತೆ ಮುಚ್ಚುವ ಸ್ಥಿತಿಯಲ್ಲಿದ್ದು ಇಲ್ಲಿನ ಜನರು ತೊಂದರೆಯನ್ನು ಅನುಭವಿಸುವಂತ್ತಾಗಿದೆ. ಪೊಯ್ಯೆದಪಲ್ಕೆಯಲ್ಲಿ 50ಕ್ಕೂ ಅಧಿಕ ಮನೆಗಳು, ಈ ರಸ್ತೆಯಿಂದ ಪ್ರಯೋಜನ ಪಡೆಯುವ 400ಕ್ಕೂ ಅಧಿಕ ಕುಟುಂಬಗಳಿಗೆ ರಸ್ತೆ ಮುಚ್ಚಿದರೆ ತೊಂದರೆ ಅನುಭವಿಸುವಂತಾಗಿದೆ.
ಅಲ್ಲದೆ ಪೊಯ್ಯೆದಪಲ್ಕೆ ರಸ್ತೆಗೆ ಅಡ್ಡಲಾಗಿ ಹಾದು ಹೋಗುವ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಕಾಮಗಾರಿ ವೇಳೆ ಹೆಚ್ಚಿನ ಪ್ರಮಾಣದ ಮಣ್ಣು, ಧೂಳು ಪರಿಸರದಲ್ಲಿ ಹರಡಿದೆ. ಸುಮಾರು ಅರ್ಧ ಕಿ.ಮೀ ರಸ್ತೆ ಮಣ್ಣಿನಿಂದ ಆವೃತ್ತವಾಗಿದೆ. ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಪ್ರತಿದಿನ ಕೆಲಸಕ್ಕೆ ಮೂಡುಬಿದಿರೆ, ಕಾರ್ಕಳ ಕಡೆಗೆ ಅಲಂಗಾರು ಜಂಕ್ಷನ್ ಮೂಲಕ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಜನರು ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಮಧ್ಯೆಯಲ್ಲಿ ನೀರು ನಿಂತಿದ್ದು, ಮಳೆ ಬಂದರೆ ಈ ರಸ್ತೆ ಕೆಸರುಮಯವಾಗಿ ಹೆಚ್ಚಿನ ತೊಂದರೆಯಾಗುತ್ತಿದೆ.
ಅಂಡರ್‌ಪಾಸ್ ಬೇಡಿಕೆ:
ಅಲಂಗಾರಿನ ಭದ್ರ ಮಿಲ್ಲ್ ಎದುರು, ಅಲಂಗಾರು-ಬೆಳ್ಮಣ್ ರಸ್ತೆಯಿಂದ ಕವಲೊಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಕೆಲಸಗಳು ನಡೆಯುತ್ತಿದೆ. ಜಾಗ ಸಮತ್ತಟ್ಟು ಸಹಿತ ಕಾಮಗಾರಿಯು ಮುಂದುವರೆದಿದೆ. ಪೊಯ್ಯೆದಪಲ್ಕೆ ಬಳಿ ಹೆದ್ದಾರಿಯ ಮುಖ್ಯ ರಸ್ತೆಯು ಕಾಮಗಾರಿಯು ಎತ್ತರವಾಗಿ ನಡೆಯುತ್ತಿದೆ. ಅದರ ಪಕ್ಕದಲ್ಲಿ ಸರ್ವಿಸ್ ರಸ್ತೆಯ ಅವಕಾಶವನ್ನೂ ನೀಡಲಾಗಿದೆ. ಒಂದು ವೇಳೆ ಈಗ ಇರುವ ರಸ್ತೆಯು ಮುಚ್ಚಿದಲ್ಲಿ, ಅಲಂಗಾರು ಜಂಕ್ಷನ್ ಸಂಪರ್ಕ ತಪ್ಪಿ, ಅಲಂಗಾರಿನಲ್ಲಿ ಕೊಡ್ಯಡ್ಕ ದೇವಳದ ಮುಖ್ಯಧ್ವಾರ ಬಳಿಯಿಂದ ಸರ್ವಿಸ್ ರಸ್ತೆಯ ಮೂಲಕ ಹೋಗುವ ಅನಿವಾರ್ಯತೆ ನಿರ್ಮಾಣವಾಗಬಹುದು. ಮುಂದಿನ ದಿನಗಳಲ್ಲಿ ಈ ಪರಿಸರದಲ್ಲಿ ವಾಹನ ದಟ್ಟನೆ ಹೆಚ್ಚಾಗಬಹುದು. ಅದರ ಬದಲು ಪೊಯ್ಯೆದಪಲ್ಕೆ ಬಳಿ ಅಂಡರ್‌ಪಾಸ್ ಮಾಡಿ, ಈಗ ಇರುವ ರಸ್ತೆಯನ್ನೇ ಸಂಪರ್ಕ ರಸ್ತೆಯನ್ನಾಗಿಸಬಹುದು ಎನ್ನುವುದು ಗ್ರಾಮಸ್ಥರ ಬೇಡಿಕೆ. ತಮ್ಮ ಬೇಡಿಕೆಯನ್ನು ರಾಷ್ಟ್ರೀಯ ಹೆದ್ದಾರಿ ಯೋಜನಾ ಅಧಿಕಾರಿಗಳು ಸಹಿತ ಸಂಬಂಧಪಟ್ಟವರ ಗಮನಕ್ಕೆ ಗ್ರಾಮಸ್ಥರು ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಇಂದು ಪ್ರತಿಭಟನೆ:
ಹೆದ್ದಾರಿ ಕಾಮಗಾರಿಯಿದ ಕಾಯಂ ರಸ್ತೆಯನ್ನು ಮುಚ್ಚುವ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟದ್ಧಿಂದು ಬೆಳಗ್ಗೆ 10 ಗಂಟಗೆ -ಪೊಯ್ಯೆದಪಲ್ಕೆಯಲ್ಲಿ ಅಲಂಗಾರು, ಕಾನ, ಅಂಬೂರಿ, ಪೊಯ್ಯೆದಪಲ್ಕೆ ಪರಿಸರದ ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆ.
ಪೊಯ್ಯೆದಪಲ್ಕೆ ರಸ್ತೆಯನ್ನು ಹೆದ್ದಾರಿಗೋಸ್ಕರ ಮುಚ್ಚಿದಲ್ಲಿ ನಾಲ್ಕೆದು ಪ್ರದೇಶದ ಜನರು ತೊಂದರೆ ಅನುಭವಿಸುತ್ತಾರೆ. ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಪ್ರದೇಶಗಳ ಜನರು ನೇರವಾಗಿ ಅಲಂಗಾರಿಗೆ ಬರುವುದು ತಪ್ಪುತ್ತದೆ. ಇಲ್ಲಿನ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಡಿ.18ರಂದು ರಸ್ತೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಲಿದ್ದೇವೆ.
-ಡೆನೀಯಲ್ ಪಿರೇರ, ಹೋರಾಟದ ಪ್ರಮುಖರು.
0 Comments