ಸ್ವಚ್ಛತೆಗೆ ಆದ್ಯತೆ ನೀಡುವ ಆಳ್ವಾಸ್ :
ವಿರಾಸತ್ ನಲ್ಲಿ 130 ಮಂದಿಯಿಂದ ಸ್ವಚ್ಚತಾಕಾರ್ಯ
ಮೂಡುಬಿದಿರೆ: ಆಳ್ವಾಸ್ ನಲ್ಲಿ ಯಾವುದೇ ಕಾರ್ಯಕ್ರಮವಾದರೂ ಅದಕ್ಕೊಂದು ಅಚ್ಚುಗಟ್ಟುತನವಿರುತ್ತದೆ. ಅದರಂತೆ ಸ್ವಚ್ಛತೆಯಲ್ಲಿಯೂ ಶಿಸ್ತನ್ನು ಪಾಲಿಸುತ್ತಿರುವ ಸಂಸ್ಥೆಯು ಮೂವತ್ತನೇ ವರ್ಷದ ವಿರಾಸತ್ ನಲ್ಲಿ 130 ಸ್ವಚ್ಛತಾ ಸಿಬಂದಿಗಳಿಂದ ಸ್ವಚ್ಛತಾ ಕಾರ್ಯವನ್ನು ಮಾಡಿಸಿದೆ.
ರಾಷ್ಟ್ರೀಯ ಸಾಂಸ್ಕೃತಿಕ. ಉತ್ಸವ ಆಳ್ವಾಸ್ ವಿರಾಸತ್ -2024 ಇದರ ಕಾರ್ಯಕ್ರಮಗಳು ಕಳೆದ ಆರು ದಿನಗಳ ಕಾಲ ಪುತ್ತಿಗೆಯ ವಿವೇಕಾನಂದ ನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ವಿವಿಧ ಮೇಳಗಳು, ಫುಡ್ ಕೋಟ್೯ಗಳು, ಫ್ಯಾನ್ಸಿಗಳು, ಬಟ್ಟೆ ಅಂಗಡಿಗಳು, ಜ್ಯೂಸ್ ಸೆಂಟರ್ ಗಳು, ಮಕ್ಕಳ ಆಟಿಕೆಗಳ ಅಂಗಡಿ ಮುಂಗಟ್ಟುಗಳು ಸೇರಿದಂತೆ 600 ಕ್ಕೂ ಮಿಕ್ಕಿದ ಸ್ಟಾಲ್ ಗಳು ಕೃಷಿಸಿರಿ ವೇದಿಕೆಯ ಆವರಣದಲ್ಲಿ ವ್ಯವಹಾರವನ್ನು ನಡೆಸುತ್ತಿದ್ದವು.
ಈ ಸ್ಟಾಲ್ ಗಳಿಗೆ ಪ್ರತಿದಿನವೂ ಒಂದು ಲಕ್ಷಕ್ಕಿಂತಲೂ ಅಧಿಕ ಜನರು ಭೇಟಿ ನೀಡುತ್ತಿದ್ದರಲ್ಲದೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು ಮತ್ತು ಆಹಾರ ಪದಾರ್ಥಗಳನ್ನು ಅಲ್ಲಿಯೇ ಸೇವಿಸುತ್ತಿದ್ದರು. ಇದರಿಂದಾಗಿ ಕಸದ ರಾಶಿಯೇ ಬೀಳಬಹುದಿತ್ತೇನೊ ಆದರೆ ಹಾಗಾಗಲಿಲ್ಲ. ಎಲ್ಲಿಯಾದರೂ ಕಸ ಬಿದ್ದರೆ ಆ ಪ್ರದೇಶವನ್ನು ಸ್ವಚ್ಛಗೊಳಿಸಲು ಪೊರಕೆ ಹಿಡಿದುಕೊಂಡು ಸ್ವಚ್ಛತಾ ಮಹಿಳೆಯರು ಧಾವಿಸಿ ಬಂದು ಆಗಲೇ ಗುಡಿಸಿ ಕಸ ಕಡ್ಟಿಗಳನ್ನು ಸ್ಟಾಲ್ ಗಳ ಪಕ್ಕದಲ್ಲಿಯೇ ಇರಿಸಲಾಗಿದ್ದ ಪ್ಲಾಸ್ಟಿಕ್ ಡ್ರಮ್ ಗಳಿಗೆ ಹಾಕಿ ಜಾಗ ಕ್ಲೀನ್ ಆಗಿ ಕಾಣುವಂತೆ ಮಾಡುತ್ತಿದ್ದರು.
ಆರು ದಿನಗಳ ಕಾಲ ನಡೆದ ಈ ಮೇಳದ ಆವರಣ ಸಹಿತ 150 ಎಕ್ರೆ ಪ್ರದೇಶವನ್ನು ಬೆಳಿಗ್ಗೆ, ರಾತ್ರಿ ಕಂಡಾಗಲೆಲ್ಲಾ ಒಂದು ತುಂಡು ಕಸದ ಚೂರು ಕಾಣಿಸುತ್ತಿರಲಿಲ್ಲ ಅಷ್ಟು ನೀಟಾಗಿ ಸ್ವಚ್ಛ ಮಾಡುವ ಮೂಲಕ ಸ್ವಚ್ಛತಾ ಸಿಬಂದಿಗಳು ತಮಗೆ ನೀಡಿರುವ ಕಾರ್ಯವನ್ನು ನಿಯತ್ತಾಗಿ ನಿರ್ವಹಿಸುವ ಮೂಲಕ ವಿರಾಸತ್ ನ ಯಶಸ್ಸಿಗೆ ಸ್ವಚ್ಛತೆಯ ಮೂಲಕ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಬಾಕ್ಸ್ :
ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ : ಕಳೆದ ವರ್ಷಗಳ ಹಿಂದೆ ಯಾವುದೇ ಕಾರ್ಯಕ್ರಮಗಳು ನಡೆದಾಗ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುತ್ತಿದ್ದ ಜನರಲ್ಲಿ ಮಕ್ಕಳಲಲ್ಲಿ ಸ್ವಚ್ಛತೆಯ ಬಗ್ಗೆ ಅರಿವಿರಲ್ಲಿಲ್ಲ ತಾವು ತಿಂದ ಆಹಾರದ ಪೇಪರ್, ಪ್ಲಾಸ್ಟಿಕ್ ಹಾಗೂ ಕುಡಿದ ನೀರಿನ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಅಲ್ಲಿಯೇ ಬೀಸಾಡಿ ಹೋಗುತ್ತಿದ್ದರು ಆದರೆ ಈಗ ಬರುವಂತಹ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವರು ಸ್ವಚ್ವತೆಗೆ ಬಹಳ ಪ್ರಾಮುಖ್ಯತೆಯನ್ನು ನೀಡುವವರು ಅದರಂತೆ ಅವರ ನಿರ್ದೇಶನದಲ್ಲಿ, ಪ್ರಾಂಶುಪಾಲ ಡಾ.ಕುರಿಯನ್ ಅವರ ನೇತೃತ್ವದಲ್ಲಿ ತಾನು ಮತ್ತು ಪ್ರೇಮನಾಥ ಶೆಟ್ಟಿ ಅವರು ಸ್ವಚ್ಛತೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದೇವೆ . ಆಳ್ವಾಸ್ ನಲ್ಲಿ ನಡೆದಂತಹ, ನುಡಿಸಿರಿ, ವಿರಾಸತ್ , ಜಾಂಬೂರಿಯಂತಹ ಕಾರ್ಯಕ್ರಮಗಳ ಸಂದರ್ಭ ಸ್ವಚ್ಛತೆಯ ಉಸ್ತುವಾರಿಯನ್ನು ಅತ್ಯಂತ ಪ್ರೀತಿಯಿಂದ ನಾವೇ ನಿರ್ವಹಿಸುತ್ತಿದ್ದೇವೆ.
ಈ ಬಾರಿಯ ವಿರಾಸತ್ ನಲ್ಲಿ 130 ಸ್ವಚ್ಛತಾ ಸಿಬಂಧಿಗಳು ರಾತ್ರಿ ಹಗಲೆನ್ನದೆ ದುಡಿದಿದ್ದಾರೆ. ಕ್ಯಾಂಪಸ್ ನಲ್ಲಿ 250 ಕಸದ ತೊಟ್ಟಿಗಳನ್ನು ಇಡಲಾಗಿತ್ತು. ಕಸ ಸಂಗ್ರಹಣೆಗೆ 4 ಟ್ರಕ್ ಹಾಗೂ ಎರಡು ಟ್ರ್ಯಾಲಿಗಳನ್ನು ಬಳಸಲಾಗಿತ್ತು ಇದರಿಂದಾಗಿ ಆವರಣ ಸ್ವಚ್ಛವಾಗಿ ಕಾಣಲು ಸಾಧ್ಯವಾಗಿದೆ ಎಂದು ಸ್ವಚ್ಛತಾ ಉಸ್ತುವಾರಿ ವಹಿಸಿಕೊಂಡಿರುವ ಸುಧಾಕರ ಪೂಂಜಾ ತಿಳಿಸಿದ್ದಾರೆ.
*ಕಳೆದ ಆರು ದಿನಗಳಿಂದ ನಾವು ವಿದ್ಯಾಗಿರಿಯ ಆವರಣದಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡುತ್ತಾ ಬಂದಿದ್ದೇವೆ. ತುಂಬಾ ಸಿಬಂದಿಗಳು ಇರುವುದರಿಂದ ಅಷ್ಟೇನೂ ಕಷ್ಟವಾಗಿಲ್ಲ ತುಂಬಾ ಸಂತೋಷದಿಂದ ದುಡಿದಿದ್ದೇವೆ. ಊಟ, ಚಾಹ, ತಿಂಡಿ ನೀಡಿ ದಿನಕ್ಕೆ 1000 ದಂತೆ ಕೂಲಿ ನೀಡಿದ್ದಾರೆ. ಬೇರೆಲ್ಲಿಯೂ ಇಷ್ಟು ಕೂಲಿ ನಮಗೆ ಸಿಕ್ಕಿಲ್ಲ ಇದು ನಮಗೆ ಸಹಕಾರಿಯಾಗಿದೆ ಎಂದು ಸ್ವಚ್ಛತಾ ಮಹಿಳೆಯರು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
0 Comments