ಕುಪ್ಪೆಪದವಿನಲ್ಲಿ ಅಪಾಯಕಾರಿ ತಿರುವು : ಸರಿಪಡಿಸಬೇಕೆಂಬ ಗ್ರಾಮಸ್ಥರ ಆಗ್ರಹಕ್ಕೆ ಕಿಂಚಿತ್ತೂ ಬೆಲೆ ನೀಡದ ಅಧಿಕಾರಿಗಳು, ಗ್ರಾಮಸ್ಥರ ಆಕ್ರೋಶ

ಜಾಹೀರಾತು/Advertisment
ಜಾಹೀರಾತು/Advertisment

 ಕುಪ್ಪೆಪದವಿನಲ್ಲಿ ಅಪಾಯಕಾರಿ ತಿರುವು : ಸರಿಪಡಿಸಬೇಕೆಂಬ ಗ್ರಾಮಸ್ಥರ ಆಗ್ರಹಕ್ಕೆ ಕಿಂಚಿತ್ತೂ ಬೆಲೆ ನೀಡದ ಅಧಿಕಾರಿಗಳು, ಗ್ರಾಮಸ್ಥರ ಆಕ್ರೋಶ

ಮೂಡುಬಿದಿರೆಯಿಂದ  ಇರುವೈಲು ಮೂಲಕ ಕುಪ್ಪೆಪದವು ಪೇಟೆಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಇರುವೈಲು ಸಮೀಪದ ದಂಬೆದ ಕೊಡಿ ಎಂಬಲ್ಲಿ ಅಪಾಯಕಾರಿ ಇಳಿಜಾರಿನಿಂದ ಕೂಡಿದ ತಿರುವು ಅಪಘಾತ ವಲಯವಾಗಿ ಪರಿವರ್ತನೆಯಾಗಿದ್ದು, ಈ ತಿರುವನ್ನು ನೇರಗೊಳಿಸಿ ಎಂಬ ಸ್ಥಳೀಯರ ಮನವಿಗಳಿಗೆ ಚಿಕ್ಕಾಸಿನ ಬೆಲೆಯೂ ಇಲ್ಲದಂತಾಗಿದ್ದು ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ಬಳಿ ದೊಡ್ಡದಾದ ಪರಂಬೊಕು ತೋಡು ಹರಿಯುತ್ತಿದ್ದು, ತೋಡಿನ ಎರಡೂ ಭಾಗಗಳು ಎತ್ತರವಾಗಿದ್ದು,

ಹಿಂದೆ ಇಲ್ಲಿ ಇದ್ದ ಕಿರು ಸೇತುವೆಯ ಬದಲಿಗೆ 2016ರಲ್ಲಿ ಹೊಸ ಸೇತುವೆ ನಿರ್ಮಾಣದ ವೇಳೆ ಅಲ್ಪ ಪ್ರಮಾಣದಲ್ಲಿ ಸೇತುವೆಯನ್ನು ಎತ್ತರಿಸಲಾಗಿತ್ತಾದರೂ ಅಗತ್ಯವಿದ್ದಷ್ಟು ಎತ್ತರಿಸದೆ ಇದ್ದ ಪರಿಣಾಮ ಇಲ್ಲಿ ವಾಹನಗಳು ಕಣಿವೆಯಂತಹ ಜಾಗಕ್ಕೆ ಇಳಿದು ಮೇಲೆ ಹತ್ತಬೇಕಾದ ಪರಿಸ್ಥಿತಿ ಇದೆ. ಸೇತುವೆಯ ಎರಡೂ ಭಾಗದಲ್ಲಿ ರಸ್ತೆಯೂ ಅಗಲ ಕಿರಿದಾಗಿದ್ದು ಇಲ್ಲಿ ಹಲವಾರು ಘನ ವಾಹನಗಳು ರಸ್ತೆಯಿಂದ ಜಾರಿ ಪಕ್ಕದ ತೋಡಿಗೂ, ಇನ್ನೊಂದು ಪಾರ್ಶ್ವದಲ್ಲಿರುವ ಖಾಸಗಿ ಜಾಗಕ್ಕೆ ಉರುಳಿ ಬಿದ್ದಿವೆ. ಕುಪ್ಪೆಪದವು ಭಾಗದಿಂದ ಸೇತುವೆ ಸಂಪರ್ಕಿಸುವ ರಸ್ತೆ ಅತೀ ಅಪಾಯಕಾರಿಯಾಗಿದ್ದು, ಎದುರುಗಡೆಯಿಂದ ಮೇಲೆ ಏರಿ ಬರುವ ವಾಹನಗಳು ಗೋಚರಿಸದೇ, ಗೋಚರಿಸಿದರೂ ಇಕ್ಕಟ್ಟಾದ ರಸ್ತೆಯಲ್ಲಿ ಮುಖಾಮುಖಿಯಾಗಿ ಅಪಘಾತಗಲಾಗುವುದು ದಿನನಿತ್ಯದ ಸಮಸ್ಯೆಯಾಗಿದೆ. ಅಲ್ಲದೇ ಇಲ್ಲಿ ರಸ್ತೆ ಡಾಮಾರು ಕಿತ್ತು ಹೋಗಿ ಉಂಟಾಗಿರುವ ಗುಂಡಿಗಳು ಸೇರಿ ಆಕ್ಸಿಡೆಂಟ್ ಸ್ಪಾಟ್ ನಿರ್ಮಾಣವಾಗಿದೆ. ಇಲ್ಲಿನ ಏರು ರಸ್ತೆಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡೆ ವಾಹನ ಚಲಾಯಿಸಬೇಕಾದ ಅನಿವಾರ್ಯತೆ ಇದೆ. 


ಪುರಾಣ ಪ್ರಸಿದ್ಧ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ದಿನ ನಿತ್ಯ ಬರುವ ನೂರಾರು ಭಕ್ತರು ಇದೇ ಆಕ್ಸಿಡೆಂಟ್ ಸ್ಪಾಟ್ ದಾಟಿಯೇ ಬರಬೇಕು.



ಇಲ್ಲಿ ರಸ್ತೆಯ ಇಕ್ಕೆಲಗಳ ಜಾಗ ಖಾಸಗಿಯವರಿಗೆ ಸೇರಿದ್ದಾದರೂ, ಎರಡೂ ಕಡೆ ತಡೆಗೋಡೆ ನಿರ್ಮಿಸಿದರೂ ಅಪಘಾತಗಳನ್ನು ತಡೆಯಬಹುದಾಗಿದೆ. ಗ್ರಾಮಸ್ಥರು ಇಲ್ಲಿ ರಸ್ತೆ ಆಗಲೀಕರಣಗೊಳಿಸಿ ಎಂದು ಮಾಡಿರುವ ಮನವಿಗಳಿಗೆ ಇದುವರೆಗೂ ಸರಕಾರವಾಗಲೀ, ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಗಲೀ ಕವಡೆ ಕಿಮ್ಮತ್ತೂ ಕೊಟ್ಟಿಲ್ಲ.


ಠುಸ್ಸೆಂದ ಜಿಲ್ಲಾಧಿಕಾರಿಗಳ ಭರವಸೆ:

2022ರ ನವೆಂಬರ್  25ರಂದು,ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ರವಿಕುಮಾರ್ ಎಂ.ಆರ್ ರವರು ಇರುವೈಲು ದೇವಸ್ಥಾನದ ಸಭಾಂಗಣದಲ್ಲಿ ನಡೆಸಿದ್ದ ಗ್ರಾಮ ವಾಸ್ತವ್ಯದ ಸಂಧರ್ಭ ಗ್ರಾಮಸ್ಥರು ನೀಡಿದ ಮನವಿ ಮತ್ತು ಗ್ರಾಮಸ್ಥರ ಅಗ್ರಹಕ್ಕೆ ಮಣಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳ ಭರವಸೆಯಿಂದ ಗ್ರಾಮಸ್ಥರು ಖುಷಿ ಪಟ್ಟಿದ್ದರು. ಆದರೆ ಡಿಸಿಯವರು ಭರವಸೆ ನೀಡಿ 2 ವರ್ಷವಾದರೂ ಸಮಸ್ಯೆ ಪರಿಹಾರವಿರಲಿ, ರಸ್ತೆ ಗುಂಡಿಗಳಿಗೆ ತೇಪೆ ಹಚ್ಚುವ ಕೆಲಸ ಕೂಡಾ ಆಗಿಲ್ಲ ಎಂದಾದರೆ ಜಿಲ್ಲಾಧಿಕಾರಿಗಳ ಭರವಸೆಯ ಕಿಮ್ಮತ್ತೇನು ಎಂಬುದು ತಿಳಿಯಬಹುದು. ಹಾಲಿ ಜಿಲ್ಲಾಧಿಕಾರಿಗಳಾದರೂ ಈ ಹಿಂದಿನ ಡಿಸಿಯವರು ಇರುವೈಲಿನ ಜನರಿಗೆ  ನೀಡಿದ್ದ ಭರವಸೆ ಈಡೇರಿಸುವರೇ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ.



ಅಂದು "ಡಿಸಿಯವರು ಸ್ಥಳಕ್ಕೆ ಭೇಟಿ ನೀಡಿ ಇದು ಬಹಳ ಇಂಪಾರ್ಟೆಂಟ್ ಆಗಿ ಆಗಬೇಕಾದ ಕೆಲಸ. ಖಂಡಿತ ಇಲ್ಲಿ ರಸ್ತೆ ನೇರಗೊಳಿಸುವ ಕಾಮಗಾರಿ ನಡೆಸುವ ಭರವಸೆ ನೀಡಿದ್ದರು. ಆದರೆ ಆ ಬಳಿಕ ಇದುವರೆಗೂ ಯಾವುದೇ ಅಧಿಕಾರಿಯಾಗಲಿ, ಇಂಜಿನಿಯರ್ ಆಗಲಿ ಇಲ್ಲಿದೆ ಬಂದಿಲ್ಲ. 


*ಗ್ರಾಮಸಭೆಯಲ್ಲೂ ನಾವು ಮನವಿ ಮಾಡಿದ್ದೆವು ಆದರೆ ಪ್ರಯೋಜನ ಮಾತ್ರ ಶೂನ್ಯ:ರಾಜೇಶ್ ಕಾಳೂರು, ಇರುವೈಲ್.


*"ಅಧಿಕಾರಿಗಳ ಗ್ರಾಮ ವಾಸ್ತವ್ಯದ ಉದ್ದೇಶ ಗ್ರಾಮದ ಸಮಸ್ಯೆ ಪರಿಹಾರಕ್ಕಾಗಿ. ಆದರೆ 2 ವರ್ಷದಲ್ಲಿ ಸಮಸ್ಯೆ ಪರಿಹಾರ ಆಗಿಲ್ಲ ಎಂದ ಮೇಲೆ ಗ್ರಾಮ ವಾಸ್ತವ್ಯದ ಅಗತ್ಯವೇನು? ನಾವು ಗ್ರಾಮ ಪಂಚಾಯತ್ ನಿಂದ ಹಿಡಿದು  ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ನಮ್ಮ ಸಮಸ್ಯೆ ಪರಿಹಾರವಾಗಿಲ್ಲ:-ಪ್ರವೀಣ್ ಪೂಜಾರಿ ಇರುವೈಲು.

Post a Comment

0 Comments