80ರ ಸಂಭ್ರಮದಲ್ಲಿರುವ ಡಾ.ನಾ.ಮೊಗಸಾಲೆಗೆ ಅಭಿನಂದನೆ
* ಸಾಹಿತ್ಯದ ಬೇರು ಗಟ್ಟಿಯಾದಾಗ ಆಳ ಅಗಲವಾಗಿ ಬೆಳೆಯುತ್ತದೆ : ಡಾ.ಹೆಗ್ಗಡೆ
ಮೂಡುಬಿದಿರೆ: ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯದ ಬೇರು ಗಟ್ಟಿಯಾದಾಗ ಸಾಹಿತ್ಯದ ಆಳ ಅಗಲವಾಗಿ ಬೆಳೆಯುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಅವರು ಶನಿವಾರ ಮೂಡುಬಿದಿರೆಯ ಸಮಾಜಮಂದಿರದ ಸ್ವರ್ಣ ಮಂದಿರದಲ್ಲಿ ನಡೆದ ಕಾಂತಾವರ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಪತ್ರಕರ್ತ ಹರೀಶ್ ಕೆ.ಆದೂರು ಅವರು ನಿರ್ದೇಶಿಸಿರುವ ಮೊಗಸಾಲೆ ಅವರ ಕುರಿತಾದ ಸಾಕ್ಷ್ಯ ಚಿತ್ರದ ಪೋಸ್ಟರನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯದ ಸೇವೆ ಪ್ರಚಾರವಾಗುತ್ತಿಲ್ಲ. ಪತ್ರಿಕೆಗಳು ಕೂಡ ಯಶಸ್ಸಾಗುವುದಿಲ್ಲ ಎಂಬ ಅಭಿಪ್ರಾಯ ಇತ್ತು. ಆದರೆ ಇದೀಗ ಅದು ಸುಳ್ಳಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಹಲವಾರು ಪತ್ರಿಕೆಗಳು ಯಶಸ್ಸು ಕಂಡಿವೆ. ಭಾಷೆ ಬೆಳೆದಾಗ ಜನರ ಜೀವನವು ಬೆಳೆಯುತ್ತದೆ ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಭಾಷೆ ಬೆಳೆಯಬೇಕು ಮತ್ತು ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಬೇಕು ಹಾಗೂ ಸಾಹಿತಿಗಳ ಸಂಖ್ಯೆ ಹೆಚ್ಚಳವಾಗಬೇಕೆಂದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ
ಡಾ. ನಾ. ಮೊಗಸಾಲೆ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಅವರು ಮೊಗಸಾಲೆಯವರ ಕೃತಿಗಳನ್ನು ಬಿಡುಗಡೆಗೊಳಿಸಿ ಅಭಿನಂದನಾ ನುಡಿಗಳನ್ನಾಡಿ ಕಾಂತಾವರದಲ್ಲಿ ಕನ್ನಡ ಸಂಘವನ್ನು ಕಟ್ಟಿದವರು. ಉತ್ತಮ ಬರೆವಣಿಗೆ ಮೂಲಕ ಜಗತ್ತನ್ನು ಅನಾವರಣಗೊಳಿಸಿದವರು, ನವ್ಯ ಕಾಲದಲ್ಲಿ ನವೋದಯದ ಹಿರಿಯ ಸಾಹಿತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಮೊಗಸಾಲೆ ಅವರು ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವ ಸಂದರ್ಭದಲ್ಲಿ ಕಳೆದ 55 ವರ್ಷಗಳಿಂದ ಮಾಡಿಕೊಂಡು ಬಂದಿರುವ ಕಾರ್ಯ ಇನ್ನೊಂದಿಲ್ಲ.
ಹಿಂದೆ ಸಾಹಿತ್ಯಗಳ ಜಗಳವನ್ನು ಕಾಣುತ್ತಿದ್ದೆವು ಆದರೆ ಇಂದು ರಾಜಕೀಯದ ದ್ವೇಷದ ಜಗಳಗಳೇ ನಮ್ಮ ಮುಂದಿವೆ. ಈ ಜಗಳದಿಂದಾಗಿ ಸಾಮಾಜಿಕ ಬದುಕು ಹಾಳಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಸಾಮಾಜಿಕ ಜಾಲತಾಣದಲ್ಲಿ ಇಡೀ ವ್ಯಕ್ತಿತ್ವ ಇದೆ ಎಂಬ ಭ್ರಮೆಯಿಂದ ಹೊರಬರುವಂತೆ ಸಲಹೆಯಿತ್ತರು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಬಿ. ಶ್ರೀನಾಥ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ವರ್ಧಮಾನ ಪ್ರಶಸ್ತಿ ಪೀಠ ಕಾರ್ಯಾಧ್ಯಕ್ಷ ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು.
ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುನೀತಾ ನಾಯಕ್ ಮತ್ತು ಪ್ರಗತಿಬಂಧು ತಂಡದವರು ಡಾ. ಹೆಗ್ಗಡೆಯವರನ್ನು ಅಭಿನಂದಿಸಿದರು.
ಎಂ. ಬಿ. ಶ್ರೀನಾಥ್ ಸ್ವಾಗತಿಸಿ, ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಕಾಂತವಾರ ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿ ಧನ್ಯವಾದವಿತ್ತರು.
ನಂತರ ತಾಳ್ತಾಜೆ ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ಮೊಗಸಾಲೆ ಅವರ ಕೃತಿಗಳನ್ನು ಡಾ.ಬಿ.ಜನಾರ್ದನ ಭಟ್ ( ಕಾದಂಬರಿ), ಡಾ.ರವಿಶಂಕರ ಜಿ.ಕೆ (ಕಾವ್ಯ) ಹಾಗೂ ಡಾ.ಸುಭಾಷ್ ಪಟ್ಟಾಜೆ ಅವರು ಸಣ್ಣಕತೆಯನ್ನು ಸಮೀಕ್ಷೆ ನಡೆಸಿದರು.
ಕೃತಿಕಾರರಾದ ಡಾ.ರವಿಶಂಕರ ಜಿ.ಕೆ., ಅಂಶುಮಾಲಿ ಹಾಗೂ ಸುಭಾಷ್ ಪಟ್ಟಾಜೆ ಅವರನ್ನು ಸನ್ಮಾನಿಸಲಾಯಿತು.
ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಗೌರವ ಕಾರ್ಯದರ್ಶಿ ಕೆ. ಸತೀಶ್ ಕುಮಾರ್ ವಂದಿಸಿದರು.
0 Comments