ನಿಡ್ಡೋಡಿ: ತ್ಯಾಜ್ಯ ಸುರಿಯ ಬಂದವರಿಂದಲೇ ಕಸ ಹೆಕ್ಕಿಸಿದ ಗ್ರಾಮಸ್ದರು
ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ನಿಡ್ಡೋಡಿಯ ಬಂಗೇರ ಪದವಿನ ಖಾಲಿ ಬಿದ್ದ ಕೆಂಪುಕಲ್ಲಿನ ಕ್ವಾರಿಗೆ ತ್ಯಾಜ್ಯ ಸುರಿಯಲು ಬಂದವರನ್ನು ಗ್ರಾಮಸ್ಥರು ಸಂಘಟಿತರಾಗಿ ತಡೆದು ಅವರಿಂದಲೇ ತ್ಯಾಜ್ಯ ಹೆಕ್ಕಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಗಂಜಿಮಠದ ಗಾಡ್‌ಫ್ರೆ ಕ್ರಾಸ್ತಾ ನಿಡ್ಡೋಡಿಯ ಬಂಗೇರ ಪದವಿನಲ್ಲಿ ಜಾಗ ಖರೀದಿಸಿ, ಕೆಂಪುಕಲ್ಲಿನ ಕ್ವಾರಿ ನಡೆಸಿ ಅದನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಇದೇ ವ್ಯಕ್ತಿ ಬೈಕಂಪಾಡಿಯ ಹಸಿಮೀನು ಸಂಸ್ಕರಣ ಘಟಕವೊಂದರ ತ್ಯಾಜ್ಯ ವಸ್ತು ಸುರಿಯಲು ಕಂಪೆನಿ ಹೊಗೈ ಮಧ್ಯವರ್ತಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆನ್ನಲಾಗಿದೆ. ಸೋಮವಾರ ರಾತ್ರಿ ಸುಮಾರು ಗಂ. 8.30..9ರ ವೇಳೆಗೆ ಕಟೀಲು, ನಿಡ್ಡೋಡಿ ಬಂಗೇರ ಪದವು ಮಾರ್ಗವಾಗಿ ತ್ಯಾಜ್ಯ ಹೊತ್ತ ಲಾರಿಯ ಬರುವಾಗ ದಾರಿಯುದ್ದಕ್ಕೂ ತ್ಯಾಜ್ಯ ವಸ್ತು ಚೆಲ್ಲಿಕೊಂಡಿರುವುದನ್ನು ಗ್ರಾಮಸ್ಥರು ಗಮನಿಸಿ ಎಲ್ಲರೂ ಒಗ್ಗಟ್ಟಾದರು.ಕೆಲವರು ಕ್ವಾರಿ ಬಳಿ ಹೋಗಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ತಡೆಯಲೆತ್ನಿಸಿದಾಗ ಮಾತಿನ ಚಕಮಕಿ ನಡೆದು ಬಿಗು ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭ ಪೊಲೀಸ ಸ್ಥಳಕ್ಕೆ ಆಗಮಿಸಿದರು. ರಾತ್ರಿಯೇ ತ್ಯಾಜ್ಯವನ್ನೆಲ್ಲ ಖಾಲಿ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಕಲ್ಲಮುಂಡ್ಕೂರು ಪಿಡಿಒ ಪ್ರಶಾಂತ್ ಶೆಟ್ಟಿ ಮೂಡುಬಿದಿರೆಯ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಆಗಮಿಸಿ, ಸ್ಥಳದ ಮಾಲಕ, ಲಾರಿ ಚಾಲಕ , ಜೆಸಿಬಿ ಚಾಲಕ ಸಂಯುಕ್ತವಾಗಿ ರಸ್ತೆಯಲ್ಲಿ ಬಿದ್ದ ತ್ಯಾಜ್ಯವನ್ನು ತೆಗೆಯಬೇಕು ಎಂದು ಎಚ್ಚರಿಸಿದರು.
0 Comments