ಗೇರು ಅಭಿವೃದ್ಧಿಗೆ 5 ಕೋಟಿ ರು. ಕ್ರಿಯಾಯೋಜನೆ: ಮಮತಾ ಗಟ್ಟಿ

ಜಾಹೀರಾತು/Advertisment
ಜಾಹೀರಾತು/Advertisment

 ಗೇರು ಅಭಿವೃದ್ಧಿಗೆ 5 ಕೋಟಿ ರು. ಕ್ರಿಯಾಯೋಜನೆ: ಮಮತಾ ಗಟ್ಟಿ

ಮೂಡುಬಿದಿರೆ:

ರಾಜ್ಯದಲ್ಲಿ ಗೇರು ಅಭಿವೃದ್ಧಿಗೆ ಕ್ಷೇತ್ರವಾರು ಜಾಗೃತಿ ಮೂಡಿಸುವುದು, ಮನೆಗೊಂದು ಗೇರು ಗಿಡ ಸಂಕಲ್ಪ ಸೇರಿದಂತೆ ಖಾಲಿ ಜಾಗದಲ್ಲಿ ಗೇರು ಸಸಿ, ಅಗತ್ಯವಿರುವಲ್ಲಿ ಹಳೆಯ ಗಿಡಗಳ ಬದಲಾವಣೆ ಹೀಗೆ ಗೇರು ಇಳುವರಿಗೆ ಹೆಚ್ಚಿನ ಆದ್ಯತೆ ನೀಡುವ ಕಾರ್ಯ ಯೋಜನೆ ನಿಗಮದ ಮುಂದಿದೆ. ಗೇರು ಇಳುವರಿ ಅಭಿವೃದ್ಧಿಪಡಿಸಲು 5 ಕೋಟಿ ರುಪಾಯಿಯ ಕ್ರಿಯಾ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.

ಅವರು ಮೂಡುಬಿದಿರೆಯ ಸಮಾಜಮಂದಿರದಲ್ಲಿ ಶುಕ್ರವಾರ ವೃಕ್ಷ ರಕ್ಷ ವಿಶ್ವ ರಕ್ಷ ಅಭಿಯಾನದಡಿ ಪೇಜಾವರ ಮಠ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಗೇರು ಉತ್ಪಾದಕರ ಸಂಘ ಮತ್ತು ಮೂಡುಬಿದಿರೆಯ ಶ್ರೀ ವಿಜಯಲಕ್ಷ್ಮೀ ಪ್ರತಿಷ್ಠಾನದ ವತಿಯಿಂದ ಉಚಿತ ಕಸಿ ಗೇರುಗಿಡಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗೇರು ಅಭಿವೃದ್ಧಿ ನಿಗಮದಲ್ಲಿ ಆದಾಯ ಇಳಿಮುಖವಾಗಿದೆ. ನಿಗಮದಡಿ 65 ಸಾವಿರ ಎಕರೆ ಪ್ರದೇಶದಲ್ಲಿ ಗೇರು ತಳಿ ಅಭಿವೃದ್ಧಿಗೆ ಅವಕಾಶವಿದ್ದರೂ ಹಣಕಾಸು ಸಹಿತ ಲೀಸ್ ಭೂಮಿ ಮೊದಲಾದ ಸಮಸ್ಯೆಗಳಿವೆ. ಖಾಲಿ ಜಾಗದಲ್ಲಿ ಹೆಚ್ಚಿನ ಗೇರು ಅಭಿವೃದ್ಧಿಗೆ ಆದ್ಯತೆ ನೀಡುತ್ತಾವೆ. ಅರಣ್ಯ ಇಲಾಖೆ, ಸಚಿವರ ಸಹಕಾರದಿಂದ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸಲಾಗುವುದು. ದೇಶದಲ್ಲೇ ವಿಶಾಲ ಸ್ಥಳಾವಕಾಶ ಇರುವ ನಿಗಮ ಗೇರು ಅಭಿವೃದ್ಧಿ ನಿಗಮ ಇದಾಗಿದ್ದು ಇಲ್ಲಿ 50 ಸಾವಿರ ಟನ್ ಬೆಳೆ ತೆಗೆದರೂ ಅದೊಂದು ಮಾದರಿ ಸಾಧನೆ ಎಂದವರು ಹೇಳಿದರು.

ಕರಾವಳಿಯಲ್ಲಿ ಹೆಚ್ಚುತ್ತಿರುವ ರಬ್ಬರ್ ತೋಟಗಳು, ಅಕೇಶಿಯಾದ ಅರಣ್ಯ ನೀರಿನ ಕೊರತೆ ಮತ್ತು ಕಾಡು ನಾಶ, ಕಾಡು ಪ್ರಾಣಿಗಳು ನಾಡಿಗೆ ವಲಸೆ ಬರುವುದಕ್ಕೆ ಕಾರಣವಾಗಿದೆ ಎನ್ನುವ ಪ್ರಶ್ನೆಗೆ ಈ ಬಗ್ಗೆ ಅರಣ್ಯ ಸಚಿವರ ಗಮನ ಸೆಳೆದು ಇಲಾಖಾ ಮಟ್ಟದಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗುವುದಾಗಿ ಅವರು ತಿಳಿಸಿದರು.


ಅಖಿಲ ಭಾರತ ಗೇರು ಸಂಘಟನೆಯ ರಾಹುಲ್ ಕಾಮತ್, ಕರ್ನಾಟಕ ಗೇರು ಉತ್ಪಾದಕ ಸಂಘದ ಅಧ್ಯಕ್ಷ ಡಿ. ಗೊಪಿನಾಥ್ ಕಾಮತ್, ವಿಜಯಲಕ್ಷ್ಮೀ ಪ್ರತಿಷ್ಠಾನದ ಎ.ಕೆ. ರಾವ್, ಮನೋಜ್ ಮಿನೇಜಸ್, ವೇಣುಗೋಪಾಲ್ ಎಸ್.ಜೆ. ಮತ್ತಿತರರು ಇದ್ದರು.

Post a Comment

0 Comments