ಆ.18ರಂದು ಪವರ್ ಫ್ರೆಂಡ್ಸ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೂಡುಬಿದಿರೆ : ಪವರ್ ಫ್ರೆಂಡ್ಸ್ ಬೆದ್ರ( ಮಹಿಳಾ ಘಟಕ) ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಆ.18ರಂದು ಕನ್ನಡ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ವಕೀಲ, ಪವರ್ ಫ್ರೆಂಡ್ಸ್ ನ ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ ತಿಳಿಸಿದರು.
ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಪವರ್ ಫ್ರೆಂಡ್ಸ್ ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಆರೋಗ್ಯ ತಪಾಸಣೆ, ಆಧಾರ್ ತಿದ್ದುಪಡಿಯ ಶಿಬಿರಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಸಹಾಯವಾಗುವಂತೆ ಮಾಡಿದೆ. ಇದೀಗ ಮತ್ತೊಮ್ಮೆ ಆರೋಗ್ಯ ತಪಾಸಣಾ ಶಿಬಿರದ ಜತೆಗೆ ಕಣ್ಣಿನ ತಪಾಸಣೆಯನ್ನು ಮಾಡಿ ಆಯ್ದ ಫಲಾನುಭವಿಗಳಿಗೆ ಕನ್ನಡಕವನ್ನು ಒದಗಿಸುವ ಯೋಜನೆಯನ್ನೂ ಒದಗಿಸಲಾಗುವುದು ಎಂದರು.
ಪ್ರಸಕ್ತ ವರ್ಷದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಕೂಡಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ಈಗಾಗಲೇ ಅಂಗವೈಕಲ್ಯದವರಿಗಾಗಿ ಒಂದು ಕಾರ್ಯಕ್ರಮವನ್ನು ಸರಕಾರಿ ಆಸ್ಪತ್ರೆಯ ಸಹಕಾರದೊಂದಿಗೆ ಮಾಡಿದ್ದೇವೆ ಮುಂದೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಬಗ್ಗೆ ಮಾಹಿತಿ ಮತ್ತು ತಪಾಸಣಾ ಶಿಬಿರವನ್ನು ಆಯೋಜಿಸುವ ಇರಾದೆ ಇದೆ ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯಾ ಎಸ್. ಶೆಟ್ಟಿ ತಿಳಿಸಿದರು.
ಹಿಂದಿನ ವರ್ಷ 700ಕ್ಕೂ ಅಧಿಕ ಮಂದಿಗೆ ಪರಿಹಾರವನ್ನು ಒದಗಿಸಲಾಗಿದೆ ಎಂದ ಪವರ್ ಫ್ರೆಂಡ್ಸ್ ನ ಅದ್ಯಕ್ಷ ವಿನಯ್ ಅವರು ಆ.18ರಂದು ಬೆಳಿಗ್ಗೆ 9.00 ಗಂಟೆಯಿಂದ 2 ಗಂಟೆವರೆಗೆ ಶಿಬಿರ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಗುರುಪ್ರಸಾದ್ ಉಪಸ್ಥಿತರಿದ್ದರು.
0 Comments