ಬಿಆರ್ ಪಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿ ಆರಂಭ

ಜಾಹೀರಾತು/Advertisment
ಜಾಹೀರಾತು/Advertisment

 ಬಿಆರ್ ಪಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿ ಆರಂಭ

ಮೂಡುಬಿದಿರೆ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ಬಾಬುರಾಜೇಂದ್ರ ಪ್ರೌಢಶಾಲೆಯಲ್ಲಿ  ಯಕ್ಷದ್ರುವ-ಯಕ್ಷಶಿಕ್ಷಣ ತರಗತಿಯನ್ನು ಸೋಮವಾರ ಉದ್ಘಾಟನೆಗೊಂಡಿತು.

ಪಟ್ಲ ಫೌಂಡೇಶನ್ ಟ್ರಸ್ಟ್ ಮೂಡುಬಿದಿರೆ ಘಟಕದ ಗೌರವ ಸಲಹೆಗಾರ ಕೆ.ಶ್ರೀಪತಿ ಭಟ್ ಉದ್ಘಾಟಿಸಿ ಮಾತನಾಡಿ ಇತಿಹಾಸದ ಪರಂಪರೆಯನ್ನು, ಕನ್ನಡ ಭಾಷೆಯ ತಿಳುವಳಿಕೆ ಮತ್ತು ಪುರಾಣದ ಕತೆಗಳನ್ನು ಮನದಟ್ಟಾಗುವಂತೆ ತಿಳಿಸಿಕೊಡುವ ಕಲೆ ಯಕ್ಷಗಾನ.  ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಯಕ್ಷಗಾನದ ಬೇರೆ ಬೇರೆ ಆಯಾಮಗಳನ್ನು ತಿಳಿಸಿಕೊಡುವ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದ ಅವರು ಮುಂದಿನ ದಿನಗಳಲ್ಲಿ ಯಕ್ಷ ಶಿಕ್ಷಣದ ಮೂಲಕ ಉತ್ತಮ ವಿಚಾರಗಳನ್ನು ತಿಳಿದುಕೊಂಡು ತಾವೇ ಪ್ರಸಂಗವನ್ನು ಆಡಿತೋರಿಸಿಕೊಳ್ಳಲು ಭಾಗಿಯಾಗುವಂತ್ತಾಗಬೇಕೆಂದು ಶುಭ ಹಾರೈಸಿದರು.

   ಮಾಜಿ ಸಚಿವ, ಬಾಬುರಾಜೇಂದ್ರ ಪ್ರೌಢಶಾಲೆಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕರಾವಳಿಯ ಗಂಡುಕಲೆ ಯಕ್ಷಗಾನ. ಮಕ್ಕಳಲ್ಲಿ ಬೇರೆ ಬೇರೆ ಕಲೆಗಳನ್ನು ಅಳವಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಯಕ್ಷಶಿಕ್ಷಣವನ್ನು ಆರಂಭಿಸಲಾಗಿದೆ. ಯಕ್ಷಗಾನದಿಂದ ಭಾಷಾ ಶುದ್ಧೀಯಾಗುತ್ತದೆ. ಯಕ್ಷಗಾನ ಕಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಗೊತ್ತಾಗಬೇಕು ಹೊರತು ಅದನ್ನು ವೃತ್ತಿಯಾಗಿಸಬೇಕೆಂದು ಹೇಳುವುದಿಲ್ಲ ಆದರೆ ಕಲೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಿ ಎಂದರು.


 ಯಕ್ಷಮೇನಕದ  ಅಧ್ಯಕ್ಷ  ಸದಾಶಿವ ರಾವ್ ನೆಲ್ಲಿಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಯಾಂತ್ರಿಕ ಜೀವನದಲ್ಲಿ ಒತ್ತಡವನ್ನು ನಿವಾರಿಸಲು ಕಲೆಗಳು ಸಹಾಯ ಮಾಡುತ್ತವೆ  ಆದ್ದರಿಂದ ಯಾವುದಾದರೊಂದು ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

 ಶಾಲೆಯ ಉಪಾಧ್ಯಕ್ಷ ಪುಷ್ಪರಾಜ್ ಜೈನ್, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಅಧ್ಯಕ್ಷ  ದಿವಾಕರ ಶೆಟ್ಟಿ ಖಂಡಿಗ, ಟ್ರಸ್ಟಿ ಪ್ರೇಮನಾಥ ಮಾರ್ಲ ಕೆ, ಯಕ್ಷ ಸಂಗಮದ ಅಧ್ಯಕ್ಷ ಎಂ.ಶಾಂತಾರಾಮ ಕುಡ್ವ,  ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)ನ ನಾಟ್ಯ ಗುರು ರಶಿತ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ತೆರೆಜಾ ಖರ್ಡೋಜಾ ಸ್ವಾಗತಿಸಿದರು.ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೆಂಕಟ್ರಮಣ ಕೆರೆಗದ್ದೆ ವಂದಿಸಿದರು.

Post a Comment

0 Comments