ಮೂಡುಬಿದಿರೆ : ಪೌರ ಕಾರ್ಮಿಕರಿಗೆ ಅಭಿನಂದನೆ,
ಯಶಸ್ವೀ ಮಹಿಳೆಯ ಹಿಂದೆ ಕುಟುಂಬವಿದ್ದಾಗ ಅಭಿವೃದ್ಧಿ: ಡಾ. ಆಶಾ ಪಿ.ಹೆಗ್ಡೆ
ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸ್ವರ್ಣ ಮಂದಿರದಲ್ಲಿ ನಡೆಯಿತು.
ಸಮಾರಂಭದಲ್ಲಿ ಡಾ. ಆಶಾ ಪಿ.ಹೆಗ್ಡೆ ಅವರು ನೂತನ ಅಧ್ಯಕ್ಷೆ ಬಿಂದಿಯಾ ಶೆಟ್ಟಿ ಸಹಿತ ಪದಾಧಿಕಾರಿಗಳ ಪದಗ್ರಹಣ, ಮೂಡುಬಿದಿರೆಯ ಆಯ್ದ ಪೌರ ಕಾರ್ಮಿಕರನ್ನು ಗೌರವಿಸುವುದು ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನೆರವೇರಿಸಿ ಮಾತನಾಡಿ ಕರ್ನಾಟಕ ರಾಜ್ಯದ ಶೇ 50ಕ್ಕೂ ಅಧಿಕ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 65ರಿಂದ 68 ಶೇ ಮಹಿಳೆಯರಲ್ಲಿ ರಕ್ತಹೀನತೆಯ ಸಮಸ್ಯೆಯಿದೆ. ಮಹಿಳಾ ಸಬಲೀಕರಣವೆಂದರೆ ಮಹಿಳೆಯರಿಗೆ ಬರೇ ಶಿಕ್ಷಣ, ಅವಕಾಶ ನೀಡಿದರೆ ಸಾಲದು. ಯಶಸ್ವೀ ಮಹಿಳೆಯ ಹಿಂದೆ ಅವಳ ಪುರುಷ ಮಾತ್ರವಲ್ಲ ಕುಟುಂಬವೇ ಜತೆಗಿದ್ದರೆ ಆಕೆ ಅಸಾಧ್ಯವನ್ನೂ ಸಾಧಿಸಬಹುದು ಎಂದ ಅವರು
ಶತಮಾನ ಕಂಡ ರೋಟರಿ ಸಂಸ್ಥೆಗೆ ಮಹಿಳೆಯರನ್ನೂ ಸೇರಿಸಿಕೊಂಡ ಬಳಿಕ ಅಭಿವೃದ್ಧಿ ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಮಹಿಳಾ ಅಧ್ಯಕ್ಷತೆ ಸಾಧ್ಯವಾಗಿದೆ. ಇನ್ನರ್ ವೀಲ್ ಸಂಸ್ಥೆಗೂ ಭಾರತೀಯರಿಗೆ ಅಧ್ಯಕ್ಷತೆ ಒಲಿದು ಬಂದಿದೆ. ಮಹಿಳಾ ಆರೋಗ್ಯ ನಮ್ಮೆಲ್ಲರ ಕಾಳಜಿ ಯಾಗಲಿ ಎಂದವರು ಹಾರೈಸಿದರು.
ಡಿ. ಜೆ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಇನ್ವರ್ಟರ್ ಕೊಡುಗೆ,
ಬಾಬು ರಾಜೇಂದ್ರ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕಗಳು, ಎಸ್ಸೆಸ್ಸೆಲ್ಸಿ ,ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರು ಕ್ಲಬ್ ವತಿಯಿಂದ ಗಣ್ಯರ ಜತೆಗೂಡಿ ಗೌರವಿಸಿದರು.
ಜಿಲ್ಲಾ ಇನ್ನರ್ ವೀಲ್ ನ ದೀಪಾ ಭಂಡಾರಿ, ಚಿತ್ರಾ ರಾವ್ ಉಪಸ್ಥಿತರಿದ್ದರು. ನಿರ್ಗಮನ ಕಾರ್ಯದರ್ಶಿ ಪೂರ್ಣಿಮಾ ದಾಮೋದರ್ ಕಳೆದ ಸಾಲಿನ ಚಟುವಟಿಕೆಗಳ ವರದಿ ಮಂಡಿಸಿದರು.
ನಿರ್ಗಮನ ಅಧ್ಯಕ್ಷೆ ಸರಿತಾ ಆಶೀರ್ವಾದ್ ಸ್ವಾಗತಿಸಿ ಕಳೆದ ವರ್ಷದಲ್ಲಿ ದಾಖಲೆಯ 151 ಸೇವಾ ಕಾರ್ಯಗಳ ಜತೆಗೆ 17 ಸಾವಿರಕ್ಕೂ ಮಿಕ್ಕಿದ ಫಲಾನುಭವಿಗಳಿಗೆ ತಲುಪಲು ಸಾಧ್ಯವಾದದ್ದು,ದೇಶದ ನೂರು ಸಾಧಕ ಇನ್ನರ್ ವೀಲ್ ಕ್ಲಬ್ ಗಳ ಪೈಕಿ ಒಂದಾಗಿ ಗೌರವಿಸಲ್ಪಟ್ಟ ಸಾಧನೆ ಅವಿಸ್ಮರಣೀಯ ಎಂದರು.
ನೂತನ ಅಧ್ಯಕ್ಷೆ ಬಿಂದಿಯಾ ಶರತ್ ಸೇವೆಯೊಂದಿಗೆ ಸಂಭ್ರಮಿಸುವ ಯೋಜನೆಗಳನ್ನು ಹಂಚಿಕೊಂಡರು.
ಅನುಷಾ ಆಚಾರ್ ಮತ್ತು ವೀಣಾ ಆರ್. ಶೆಟ್ಟಿ ಅವರನ್ನು ಇನ್ನರ್ ವೀಲ್ ಬಳಗಕ್ಕೆ ನೂತನ ಸದಸ್ಯರಾಗಿ ಸ್ವಾಗತಿಸಲಾಯಿತು.
ರೋಟರಿ ಅಧ್ಯಕ್ಷ ರವಿಪ್ರಸಾ್ದ್ ಉಪಾಧ್ಯಾಯ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಶುಭ ಹಾರೈಸಿದರು.
ನೂತನ ಕಾರ್ಯದರ್ಶಿ ಡಾ. ಸೀಮಾ ಸುದೀಪ್ ವಂದಿಸಿದರು. ಸಹನಾ ನಾಗರಾಜ್ ಮತ್ತು ಸೋನಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
0 Comments