ಮಂಗಳೂರು : ಪ್ರತಿಯೊಬ್ಬರೂ ಕಾನೂನಿನ ಕನಿಷ್ಠ ಜ್ಞಾನವನ್ನು ಹೊಂದುವುದು ಅಗತ್ಯ. ನಿತ್ಯ ಜೀವನದಲ್ಲಿ ಸರಳ ಕಾನೂನಿನ ಅರಿವು ಇದ್ದರೆ ಮೋಸ ಹೋಗುವುದರಿಂದ ಪಾರಾಗಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಕೀಲೆ ಡಾ. ಅಕ್ಷತಾ ಆದರ್ಶ್ ಅವರು ಬರೆದ ‘ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ’ ಎಂಬ ಕಾನೂನು ಮಾಹಿತಿ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನ್ಯಾಯ ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಸಿಗಬೇಕು. ನಂಬಿಕೆಯೇ ಜೀವನದ ಆಧಾರ. ನಂಬಿಕೆಯಲ್ಲಿ ನಮ್ಮ ಎಲ್ಲ ವ್ಯವಹಾರಗಳು ನಡೆಯುತ್ತದೆ. ಆದ ಕಾರಣ ವ್ಯವಹಾರದಲ್ಲಿ ವಿಶ್ವಾಸ, ನಂಬಿಕೆ ಮುಖ್ಯವೆಂದು ಅಭಿಪ್ರಾಯಪಟ್ಟ ಹೆಗ್ಗಡೆಯವರು ಕಾನೂನಿನ ಚೌಕಟ್ಟಿನ ಒಳಗೆ ವ್ಯವಹಾರ ಮಾಡಬೇಕಾಗಿದೆ. ಕಾನೂನಿನ ಪ್ರಜ್ಞೆ ಇಲ್ಲದೆ ಮಾಡಿದ ತಪ್ಪುಗಳಿಗೆ ವಿನಾಯಿತಿ ಇರುವುದಿಲ್ಲ ಎಂದರು.
ಡಾ. ಅಕ್ಷತಾ ಆದರ್ಶ್ ಅವರು ಬರೆದಿರುವ ಕೃತಿಯಲ್ಲಿ ಕಾನೂನಿಗೆ ಸಂಬಂಧಿಸಿದ 201 ಪ್ರಶ್ನೆಗಳಿಗೆ ಉತ್ತರ ಇದೆ. ಇದೇ ರೀತಿ ಜನರಿಗೆ ಕಾನೂನಿನ ಮಾಹಿತಿ ಒದಗಿಸುವ ಪುಸ್ತಕಗಳು ಇನ್ನಷ್ಟು ಬರಲಿ ಎಂದು ಹಾರೈಸಿದರು.
ಕಾನೂನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತರ - ಡಾ. ಮೋಹನ ಆಳ್ವ
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಮಾತನಾಡಿ, ಕಾನೂನಿನ ಜ್ಞಾನ ನಿತ್ಯ ಜೀವನದಲ್ಲಿ ಅಗತ್ಯ. ದೈನಂದಿನ ಬದುಕಿನಲ್ಲಿ ಎದುರಾಗುವ ಕಾನೂನಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಉತ್ತರ ಡಾ. ಅಕ್ಷತಾ ಅವರ ಕೃತಿಯಲ್ಲಿ ಅಡಕವಾಗಿದೆ. ಎಲ್ಲರಿಗೂ ಇದೊಂದು ಪರಾಮರ್ಶ ಗ್ರಂಥವಾಗಿದೆ. ಪುಸ್ತಕದಲ್ಲಿ ಕಾನೂನಿನ ಭಾಷೆ ಇಲ್ಲ. ನಿತ್ಯ ಬಳಕೆಯ ಭಾಷೆಯಲ್ಲಿ ಸರಳವಾಗಿ ಬರೆಯಲಾಗಿದೆ. ಇದರಿಂದಾಗಿ ಈ ಪುಸ್ತಕವನ್ನು ಓದುವವನಿಗೆ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್. ವಿ. ರಾಘವೇಂದ್ರ, ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ಧರ್ಮರಾಜ್ ಜೈನ್ ಶುಭ ಹಾರೈಸಿದರು. ಮೂಡುಬಿದಿರೆ ಚೌಟರ ಅರಮನೆಯ ಆದರ್ಶ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಆಕಾಶ್ ಜೈನ್ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಡಾ. ಅಕ್ಷತಾ ಆದರ್ಶ್ ಚೌಟರ ಅರಮನೆ ಅವರು ಕೃತಿಯ ಕುರಿತು ಮಾತನಾಡಿದರು. ಜೈನ್ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
0 Comments