ಬಿಆರ್ ಪಿ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಮೂಡುಬಿದಿರೆ: ಬಾಬು ರಾಜೇಂದ್ರ ಪ್ರೌಢಶಾಲೆಯ ಸಂಸ್ಥಾಪಕರ ದಿನವನ್ನು ಬುಧವಾರ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.
ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶೆಟ್ಟಿ ಅವರು ಶಾಲಾ ಹಸ್ತಪ್ರತಿ "ರಾಜೇಂದ್ರ" ವನ್ನು ಬಿಡುಗಡೆಗೊಳಿಸಿ ಮಾತನಾಡಿ ವಿದ್ಯಾರ್ಥಿಗಳು ಓದುವುದನ್ನು
ಸರಿಯಾಗಿ ಗಮನದಲ್ಲಿಟ್ಟುಕೊಂಡು ಓದಿ. ನೀವು ಎಷ್ಟು ಸಲ, ಎಷ್ಟು ದಿನ ಓದಿದ್ದೀರಿ ಎನ್ನುವುದು ಮುಖ್ಯ ಅಲ್ಲ.ಕಠಿಣ ಪರಿಶ್ರಮ, ತಾಳ್ಮೆ, ಅಚಲವಾದ ನಂಬಿಕೆ, ಯಶಸ್ಸು ಗಳಿಸುತ್ತೇನೆಂಬ ವಿಶ್ವಾಸ ಹಾಗೂ ಶಿಸ್ತು ನಿಮ್ಮಲ್ಲಿದ್ದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.
ಇಂದು ಶಿಕ್ಷಣ ಸೇವೆಯಾಗಿ ಉಳಿದಿಲ್ಲ ಬದಲಾಗಿ ಅದು ಉದ್ಯಮವಾಗಿ ಬೆಳೆಯುತ್ತಿದೆ. ಆದರೆ ಶ್ರೀಮಹಾವೀರ ಕಾಲೇಜು ಮತ್ತು ಬಿಆರ್ ಪಿ ಪ್ರೌಢಶಾಲೆಯು ಆರಂಭವಾದಾಗ ಯಾವ ಉದ್ದೇಶವನ್ನಿಟ್ಟುಕೊಂಡಿತ್ತೋ ಅದೇ ಮೂಲ ಉದ್ದೇಶವನ್ನು ಮರೆಯದೆ ಸಂಸ್ಥೆಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಸಚಿವ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅವರು ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಸಂಚಾಲಕ ರಾಮನಾಥ್ ಭಟ್ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದವರನ್ನು ನೆನಪಿಸಿ ಮುಂದೆಯೂ ಸಹಕಾರವನ್ನು ನೀಡುವಂತೆ ವಿನಂತಿಸಿದರು.
ಸನ್ಮಾನ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಾದ ಭಾಗೀರಥಿ, ಮೇಘಾ ಮತ್ತು ಧನುಷ್ ಅವರನ್ನು ಶಾಲು ಹೊದಿಸಿ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪುರಸಭಾ ಸದಸ್ಯೆ ಸ್ವಾತಿ ಪ್ರಭು, ಶಾಲಾ ಹಿತೈಷಿ ಶ್ರೀಧರ್ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಅಜಿತ್ ಕುಮಾರ್, ಸತೀಶ್ ಕಾಮತ್ ವೆಂಕಟೇಶ್ ಕಾಮತ್, ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಜಾ, ನಿವೃತ್ತ ಸಿಬಂದಿಗಳಾದ ಚಂದ್ರಕಲಾ, ದಾಮೋದರ ಮತ್ತು ಸುಂದರ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ತೆರೆಜಾ ಕರ್ಡೋಜಾ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಬಾಹುಬಲಿ ಶಾಲೆ ಆರಂಭಗೊಳ್ಳಲು ಕಾರಣೀಕರ್ತರಾದವರನ್ನು ನೆನಪಿಸಿದರು. ಶಿಕ್ಷಕ ಶಂಕರ್ ಭಟ್ ಬಾಲ ಕಾರ್ಮಿಕ ವಿರೋಧಿ ದಿನದ ಬಗ್ಗೆ ಮಾಹಿತಿ ನೀಡಿದರು. ಭರತ್ ಅವರು ಹಸ್ತಪ್ರತಿಯ ಬಗ್ಗೆ ಮಾಹಿತಿ ನೀಡಿದರು. ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕಿರಣ್ ವಂದಿಸಿದರು.
0 Comments