"ವಿದ್ಯುತ್ ಸಂಪರ್ಕ"ದ ನಿರೀಕ್ಷೆಯಲ್ಲಿ ಮೂಡುಬಿದಿರೆಯ ಕೊರಗ ಕುಟುಂಬ
ಮೂಡುಬಿದಿರೆ : ನೀರು, ಮನೆ, ರಸ್ತೆ ಮತ್ತು ಕರೆಂಟು ಇದು ಜನರಿಗೆ ಅಗತ್ಯವಾಗಿ ಬೇಕಾಗುವ ಮೂಲಭೂತ ಸೌಕರ್ಯಗಳು. ಆದರೆ ನಮ್ಮ ಸಮಾಜದ ಕಟ್ಟಕಡೆಯ ಸಮುದಾಯವಾಗಿರುವ ಕೊರಗ ಕುಟುಂಬವೊಂದು ವಿದ್ಯುತ್ ದೀಪದ ಸಂಪರ್ಕವಿಲ್ಲದೆ ಕಳೆದ 10 ವರ್ಷಗಳಿಂದ ಡೀಸೆಲ್ ಬೆಳಕಿನಲ್ಲಿ ಕಾಲ ಕಳೆಯುತ್ತಿರುವುದು ಮೂಡುಬಿದಿರೆಯಲ್ಲಿ ಕಂಡು ಬಂದಿದೆ.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾಸ್ತಿಕಟ್ಟೆಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ವಾಸವಿದ್ದ ಕೊರಗ ಜನಾಂಗದ ದಿ.ತನಿಯ ಎಂಬವರ ಪುತ್ರ ಪ್ರಸಾದ್ ಎಂಬವರೇ ತನ್ನ ಮನೆಗೆ ಬೆಳಕಿನ ಆಶ್ರಯವಿಲ್ಲದೆ ಜೀವನ ನಡೆಸುತ್ತಿರುವವರು. ತಮ್ಮ ಹೆತ್ತವರಿದ್ದ ಗುಡಿಸಲಿನ ಬಳಿಯಲ್ಲೇ ಕಳೆದ ಹತ್ತು ವರ್ಷಗಳ ಹಿಂದೆ ತಾನು ಕೂಲಿ ಕೆಲಸ ಮಾಡಿ ಉಳಿಸಿಟ್ಟ ಹಣದಲ್ಲಿ ಸಿಮೆಂಟ್ ಸೀಟನ್ನು ಹಾಸಿದ ಮನೆಯನ್ನು ನಿರ್ಮಿಸಿದ್ದರು.
ರೇಶನ್ ನಲ್ಲಿ ಸೀಮೆ ಎಣ್ಣೆಯೂ ಸಿಗದಿರುವುದರಿಂದ ರಾತ್ರಿ ಡೀಸೆಲ್ ನ್ನು ಬಳಸಿ ಆ ಮೂಲಕ ಬೆಳಕನ್ನು ಕಂಡುಕೊಂಡಿದ್ದರು. ದಿನ ಕಳೆದಂತೆ ಮನೆಗೆ ವಿದ್ಯುತ್ ಸಂಪರ್ಕದ ಅಗತ್ಯತೆಯನ್ನು ಅರಿತ ಪ್ರಸಾದ್ ಅವರು ಪುರಸಭೆಗೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿ ನೀಡಿ ತುಂಬಾ ಸಮಯವಾದ ಕಾರಣ ವಿಚಾರಣೆಗೆಂದು ಪುರಸಭೆಗೆ ಹೋಗಿದ್ದರು. ಆದರೆ ಪುರಸಭೆಯಲ್ಲಿ ಅವರು ನೀಡಿದ ಅರ್ಜಿಯೇ ಕಾಣೆಯಾಗಿತ್ತು ಅಲ್ಲದೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದರು.
ನಂತರ ವಿಚಾರಿಸಿದಾಗ ಪ್ರಸಾದ್ ಅವರು ಮನೆ ನಿರ್ಮಿಸಿರುವ ಜಾಗವು ಸರಕಾರಿ ಜಾಗವೆಂದು ತಿಳಿಸಿದ್ದಾರೆನ್ನಲಾಗಿದೆ ಇದರಿಂದಾಗಿ ಈ ಕುಟುಂಬಕ್ಕೆ ವಿದ್ಯುತ್ ಸಂಪರ್ಕವನ್ನು ನೀಡುತ್ತಿಲ್ಲವೆಂದು ತಿಳಿದು ಬಂದಿದೆ.
ತಮ್ಮ ತಂದೆ ತಾಯಿ ಕೂಡಾ ಇದೇ ಜಾಗದಲ್ಲಿ ಹಿಂದೆ ಸಣ್ಣ ಮನೆಯಲ್ಲಿ ವಾಸವಾಗಿದ್ದರು ಆದ್ದರಿಂದ ತಾನು ಕೂಡಾ ಇದೇ ಜಾಗದಲ್ಲಿ ಮನೆ ನಿರ್ಮಿಸಿದ್ದೇನೆ ಇದು ಸರಕಾರಿ ಜಾಗವೆಂದು ತನಗೆ ತಿಳಿದಿಲ್ಲ ಆದ್ದರಿಂದ ತನ್ನ ಮನೆಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡುವಂತೆ ಪ್ರಸಾದ್ ಅವರು ವಿನಂತಿಸಿದ್ದಾರೆ.
ಹಿಂದೆ ಪುರಸಭೆಯಲ್ಲಿ ಬದಲಿ ಪೌರ ಕಾರ್ಮಿಕನಾಗಿ ದುಡಿಯುತ್ತಿದ್ದ ಪ್ರಸಾದ್ ಅವರು ಇದೀಗ ಬೇರೆ ಕಡೆಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಮನೆ ನಿರ್ಮಿಸುವಾಗ ಯಾರೂ ಸರಕಾರಿ ಜಾಗವೆಂದು ತಿಳಿಸದಿದ್ದರಿಂದ ಇದೀಗ ಅವರ ಮನೆಗೆ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾನವೀಯತೆಯ ನೆಲೆಯಲ್ಲಾದರೂ ಇತ್ತ ಕಡೆ ಗಮನ ಹರಿಸಿ ಕೊರಗ ಕುಟುಂಬಕ್ಕೆ "ಬೆಳಕು" ನೀಡಿ ಸಹೃಯವನ್ನು ಮೆರೆಯಬೇಕಾಗಿದೆ.
ವರದಿ: ಪ್ರೇಮಶ್ರೀ ಕಲ್ಲಬೆಟ್ಟು
0 Comments