ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ತಲೆ ಮರೆಸಿಕೊಂಡಿದ್ದ ಶಿಕ್ಷಕ ಪೊಲೀಸರ ವಶಕ್ಕೆ
ಮೂಡುಬಿದಿರೆ: ತಾನು ವಿದ್ಯೆ ನೀಡುತ್ತಿದ್ದ ವಿದ್ಯಾರ್ಥಿನಿಯರನ್ನು ಕಾಮದ ದೃಷ್ಠಿಯಿಂದ ನೋಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿ ತಲೆ ಮರೆಸಿಕೊಂಡಿದ್ದ ಶಿಕ್ಷಕನನ್ನು ಸಿಸಿಬಿ ಹಾಗೂ ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಗುರುವಾರ ರಾತ್ರಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲಾ ಶಿಕ್ಷಕ ಗುರು ಎಂ.ಪಿ ಈ ಪ್ರಕರಣದ ಆರೋಪಿ.
ಈ ಘಟನೆ ನಡೆದು ಶಿಕ್ಷಣ ವಿರುದ್ಧ ಕೇಸು ದಾಖಲಾಗಿ ತಿಂಗಳಾಗುತ್ತಾ ಬಂದಿದ್ದರೂ ಆರೋಪಿ ಶಿಕ್ಷಕನ ಬಂಧನವಾಗಿರಲಿಲ್ಲ. ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಯ ಬಂಧನವಾಗದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.
ಈ ನಡುವೆ ಶಿಕ್ಷಕ ಗುರು ಎಂ.ಪಿ. ತಮ್ಮ ನ್ಯಾಯವಾದಿ ಮೂಲಕ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿ ತಿರಸ್ಕೃತಗೊಂಡಿತ್ತು.
ಪೊಲೀಸರಿಗೆ ಸಿಗದೆ ಕೊಕ್ಕಡದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದರೆನ್ನಲಾದ ಶಿಕ್ಷಕನನ್ನು ಸಿಸಿಬಿ ಹಾಗೂ ಮೂಡುಬಿದಿರೆ ಪೊಲೀಸರು ಕೊಕ್ಕಡದಲ್ಲಿ ಬಂಧಿಸಿದ್ದಾರೆ.
ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಎಸ್ಸೆಸೆಲ್ಸಿ ಪರೀಕ್ಷೆಗೆ ಟ್ಯೂಷನ್ ಕೊಡುವ ನೆಪದಲ್ಲಿ ಬರಲು ಹೇಳಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇದು ಹೇಗೋ ಗೊತ್ತಾಗಿ ಅದೇ ಹೈಸ್ಕೂಲ್ ನ ಮುಖ್ಯೋಪಾಧ್ಯಾಯ ಸದಾನಂದ ಅವರು ಪೊಲೀಸರಿಗೆ ದೂರು ನೀಡಿದ್ದರು. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಗುರು ಮಾಷ್ಟ್ರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.ಇದೀಗ ಆರೋಪಿ ಶಿಕ್ಷಕನನ್ನು ಬಂಧಿಸಿರುವ ಪೊಲೀಸರು ಪಾಂಡೇಶ್ವರ ಠಾಣೆಗೆ ಒಪ್ಪಿಸಿದ್ದಾರೆ.
0 Comments