ಶಿರ್ತಾಡಿ ಗ್ರಾಪಂಗೆ ಪ್ರತ್ಯೇಕ ಕೃಷಿ ಪತ್ತಿನ ಸಹಕಾರಿ ಸಂಘ: ಕಲ್ಲಬೆಟ್ಟು ಸಹಕಾರಿ ಸಂಘದಲ್ಲಿ ನಿರ್ಣಯ
ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವಿಶೇಷ ಸಭೆಯಲ್ಲಿ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘವನ್ನು ವಿಭಜಿಸಿ ಶಿರ್ತಾಡಿ ಗ್ರಾಮ ಪಂಚಾಯಿತಿಗೆ ಪ್ರತ್ಯೇಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ರಚಿಸುವುದಕ್ಕೆ ನಿರ್ಣಯಿಸಲಾಯಿತು.
ಕಲ್ಲಬೆಟ್ಟು ಸಹಕಾರಿ ಸಂಘದ ವ್ಯಾಪ್ತಿಗೊಳಪಟ್ಟ ಶಿರ್ತಾಡಿ ಗ್ರಾಮ ಪಂಚಾಯಿತಿಗೆ ಪಡುಕೊಣಾಜೆ, ಮೂಡುಕೊಣಾಜೆ ಹಾಗು ಶಿರ್ತಾಡಿ ಗ್ರಾಮಗಳನ್ನು ಸೇರಿಸಿ ಪ್ರತ್ಯೇಕ ಕೃಷಿಪತ್ತಿನ ಪ್ರಾಥಮಿಕ ಸಹಕಾರ ಸಂಘವನ್ನು ಸ್ಥಾಪಿಸುವ ಕುರಿತು ಸರ್ಕಾರದ ನಿರ್ದೇಶನದಂತೆ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರು ಮುಂದಿನ ಕ್ರಮಕ್ಕಾಗಿ ಕಲ್ಲಬೆಟ್ಟು ಸೊಸೈಟಿಗೆ ನೀಡಿದ ಆದೇಶದ ಬಗ್ಗೆ ಸಂಘದ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಸಭೆಯ ಗಮನಕ್ಕೆ ತಂದು ಸದಸ್ಯರ ಅಭಿಪ್ರಾಯ ಕೇಳಿದರು.
ಶಿರ್ತಾಡಿ ಪಂಚಾಯತ್ ಮಾಜಿ ಮಂಡಲ ಪ್ರಧಾನರಾದ ಸಂಪತ್ ಕುಮಾರ್ ಮಾತನಾಡಿ, ಪ್ರತಿ ಪಂಚಾಯತ್ ನಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಇರಬೇಕೆಂಬುದು ಸರ್ಕಾರದ ಹೊಸ ನಿಯಮವಾಗಿದ್ದು, ಆ ಪ್ರಕಾರ ಶಿರ್ತಾಡಿ ಪಂಚಾಯತ್ ನಿಂದ ಇಂತದ್ದೊಂದು ಅವಕಾಶ ಸಿಕ್ಕಿದೆ. ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳುವುದು ಸರಿ ಅಲ್ಲ. ಕಲ್ಲಬೆಟ್ಟು ಸೊಸೈಟಿಯನ್ನು ವಿಭಜಿಸಿ ಶಿರ್ತಾಡಿಗೆ ಪ್ರತ್ಯೇಕ ಸಹಕಾರ ಸಂಘ ರಚಿಸಲು ನಿರ್ಣಯ ಕೈಗೊಳ್ಳಬೇಕು. ಕಲ್ಲಬೆಟ್ಟು ಸೊಸೈಟಿಯಿಂದ ಶಿರ್ತಾಡಿ ಪರಿಸರದ ರೈತರಿಗು ಒಳ್ಳೆಯ ಸೇವೆ ಸಿಕ್ಕಿದೆ ಎಂದರು. ಪಂಚಾಯತ್ ಸದಸ್ಯ ಸುಖೇಶ್ ಶೆಟ್ಟಿ ಮಾತನಾಡಿ, ಎಸ್.ಡಿ ಸಾಮ್ರಾಜ್ಯರು ಶಾಸಕರಾಗಿದ್ದಾಗ ತಾಲೂಕು ಕೇಂದ್ರಗಳಿಗೆ ಬೇಕಾಗುವ ಹೆಚ್ಚಿನ ಇಲಾಖೆಗಳನ್ನು ಶಿರ್ತಾಡಿಗೆ ತರಿಸಿದ್ದಾರೆ. ಬೆಳೆಯುತ್ತಿರುವ ಶಿರ್ತಾಡಿಗೆ ಸಹಕಾರಿ ಸಂಘದ ಅಗತ್ಯ ಇದ್ದು ಕಲ್ಲಬೆಟ್ಟು ಸಂಘದಿಂದ ನಮ್ಮನ್ನು ಪ್ರತ್ಯೇಕಿಸಬೇಕೆಂದು ಅವರು ಮನವಿ ಮಾಡಿದರು.
ಲ್ಯಾನ್ಸಿ ಪಿಂಟೊ ಕೂಡ ಕಲ್ಲಬೆಟ್ಟು ಸೊಸೈಟಿಯನ್ನು ವಿಭಜಿಸುವುದಕ್ಕೆ ಸಹಮತ ವ್ಯಕ್ತಪಡಿಸಿದರು.
ಆದರೆ ಸತೀಶ್ ಕೋಟ್ಯಾನ್ ಕಲ್ಲಬೆಟ್ಟು ಸೊಸೈಟಿಯನ್ನು ವಿಭಜಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಉಳಿದಂತೆ ಬೇರೆ ಸದಸ್ಯರಿಂದ ವಿರೋಧ ವ್ಯಕ್ತವಾಗದಿದ್ದುರಿಂದ ಪಡುಕೊಣಾಜೆ, ಮೂಡುಕೊಣಾಜೆ ಮತ್ತು ಶಿರ್ತಾಡಿ ಗ್ರಾಮಗಳನ್ನು ಸೇರಿಸಿ ಶಿರ್ತಾಡಿಯಲ್ಲಿ ಪ್ರತ್ಯೇಕ ಸಹಕಾರ ಸಂಘವನ್ನು ಸ್ಥಾಪಿಸುವುದಕ್ಕೆ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಕಲ್ಲಬೆಟ್ಟು ಸೊಸೈಟಿಯಲ್ಲಿ ಇನ್ನು ಮುಂದೆ ಕಲ್ಲಬೆಟ್ಟು ಗ್ರಾಮ ಪೂರ್ತಿ ಹಾಗು ಕರಿಂಜೆ ಮತ್ತು ಮಾರೂರು ಭಾಗಶ: ಗ್ರಾಮ ಮಾತ್ರ ಉಳಿದುಕೊಳ್ಳಲಿದೆ. ಈ ಮಹತ್ವದ ಸಭೆಗೆ 13 ಜನ ನಿರ್ದೇಶಕರ ಪೈಕಿ 5 ಮಂದಿ ನಿರ್ದೇಶಕರು ಗೈರಾಗಿದ್ದಾರು. ಸಂಘದ ಉಪಾಧ್ಯಕ್ಷ ದಿಲೀಪ್ ಶೆಟ್ಟಿ, ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಶೆಟ್ಟಿ ಸ್ವಾಗತಿಸಿದರು. ಸುರೇಶ್ ಪೈ ವಂದಿಸಿದರು.
0 Comments