ಅಡಿಕೆ ಆಮದು ನಿಷೇಧ, ರೂ. ೪೫೦ ಕನಿಷ್ಟ ಬೆಂಬಲ ಬೆಲೆಗೆ ಆಗ್ರಹಿಸಿ ರೈತರಿಂದ ಮೂಡುಬಿದಿರೆಯಲ್ಲಿ ಪ್ರತಿಭಟನಾ ಜಾಥಾ

ಜಾಹೀರಾತು/Advertisment
ಜಾಹೀರಾತು/Advertisment

 ಅಡಿಕೆ ಆಮದು ನಿಷೇಧ,  ರೂ. ೪೫೦ ಕನಿಷ್ಟ ಬೆಂಬಲ ಬೆಲೆಗೆ ಆಗ್ರಹಿಸಿ ರೈತರಿಂದ

ಮೂಡುಬಿದಿರೆಯಲ್ಲಿ  ಪ್ರತಿಭಟನಾ ಜಾಥಾ

ಮೂಡುಬಿದಿರೆ : ವಿದೇಶಿ ಅಡಿಕೆ ಆಮದನ್ನು ನಿಷೇಧಿಸಬೇಕು, ತೆಂಗು ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಮತ್ತು  ಹೊಸ ಅಡಿಕೆಗೆ ಪ್ರತೀ ಕೆ.ಜಿಗೆ 450 ರೂಪಾಯಿ ಬೆಂಬಲ ಬೆಲೆಯನ್ನು  ಘೋಷಿಸಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ  ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನಾ  ಜಾಥ ಮಂಗಳವಾರ ನಡೆಯಿತು.

ಬಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ರಾಜಕಾರಣಿಗಳು, ವ್ಯಾಪಾರಿಗಳು, ದಲ್ಲಾಳಿಗಳಿಂದ ರೈತರು ಶೋಷಣೆಗೊಳಗಾಗುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಸುಮಾರು ೭ ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ, ವ್ಯಾಪಾರಿಗಳು, ದಲ್ಲಾಳಿಗಳಿಂದ ರೈತರನ್ನು ರಕ್ಷಿಸಬೇಕು. ವೆಚ್ಚ ಆಧಾರಿತ ಬೆಲೆ ನಿಗದಿಪಡಿಸಬೇಕು.ರೈತರು ಪ್ರತೀ ಗ್ರಾಮಗಳಲ್ಲಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.


ಬಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ ವಿದೇಶದಿಂದ ಸಾವಿರಾರು ಟನ್ ಅಡಕೆ ಬರುತ್ತಿದೆ, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ದೆಹಲಿ ಮಾದರಿಯ ಹೋರಾಟ ನಡೆಯಬೇಕಿದೆ ಎಂದರು.


ರೈತ ಮುಖಂಡ ವಲೇರಿಯನ್ ಕುಟಿನ್ಹಾ ಮಾತನಾಡಿ ಕಳಪೆ ಗುಣಮಟ್ಟದ ಅಡಕೆ ಆಮದು ಮಾಡಲಾಗುತ್ತ ಇರುವುದರಿಂದ ಉತ್ತಮ ಗುಣಮಟ್ಟದ ನಮ್ಮ ದೇಶೀಯ  ಅಡಿಕೆಯ ಬೆಲೆ ತೀವ್ರ ಕುಸಿತವಾಗಿದ್ದರೂ ಕೇಂದ್ರ ಸರ್ಕಾರ ಅಡಿಕೆ ಆಮದನ್ನು ಸಂಪೂರ್ಣ ನಿರ್ಬಂಧಿಸುವ ಮತ್ತು ಕಳ್ಳ ಸಾಗಾಣಿಕೆಯ ವಿರುದ್ಧ ಕಠಿಣವಾದ ಕಾನೂನನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವುದು ನಮ್ಮೆಲ್ಲರ ದುರಂತವಾಗಿದೆ. ಅಡಿಕೆಗೆ ಬೆಂಬಲ ಬೆಲೆಯನ್ನು ಘೋಷಿಸುವಲ್ಲಿ ರಾಜ್ಯ ಸರ್ಕಾರವು ನಿಷ್ಕ್ರಿಯತೆಯನ್ನು ತೋರಿಸುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ತೀವೃವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

 

ರೊನಾಲ್ಡ್ ಸೆರಾವೋ ಮನವಿಪತ್ರ ವಾಚಿಸಿದರು. ಜೋಯ್ಲಸ್ ಡಿಸೋಜ ಸ್ವಾಗತಿಸಿದರು. ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Post a Comment

0 Comments