೬೯ನೇ ಹಿರಿಯ ಮಹಿಳೆಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್
* ಕರ್ನಾಟಕ ಚಾಂಪಿಯನ್: ಆಳ್ವಾಸ್ ನ ೮ ಆಟಗಾರ್ತಿಯರು ಭಾಗಿ
ಮೂಡುಬಿದಿರೆ : ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದ ೬೯ನೇ ಮಹಿಳೆಯರ ಹಿರಿಯ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವು ವಿಜಯಿಯಾಗಿದ್ದು , ರಾಜ್ಯ ತಂಡವನ್ನು ಪ್ರತಿನಿಧಿಸಿದ ೧೦ ಆಟಗಾರರ ಪೈಕಿ ೮ ಮಂದಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳಾಗಿದ್ದಾರೆ.
ರಾಜ್ಯ ತಂಡವನ್ನು ಆಳ್ವಾಸ್ ಕಾಲೇಜಿನ ಕ್ರೀಡಾಪಟು ದಿವ್ಯಾ ಎಂ. ಮುನ್ನಡೆಸಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ನೀಡುವ ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಪಲ್ಲವಿ ಬಿ.ಎಸ್. ಹಾಗೂ ಸಹನಾ ಎಚ್.ವೈ. ಮುಡಿಗೇರಿಸಿಕೊಂಡಿದ್ದಾರೆ.
ಕರ್ನಾಟಕ ತಂಡವು ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ೩೫-೨೯, ೩೫-೨೬ ಅಂಕಗಳ ನೇರ ಸೆಟ್‌ಗಳಿಂದ ಮಣಿಸಿ, ಪ್ರಶಸ್ತಿಗೆ ಮುತ್ತಿಕ್ಕಿತ್ತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ೩೫-೧೧, ೩೫-೧೬ ಅಂಕಗಳಿಂದ ಕೇರಳ ತಂಡಕ್ಕೆ ಸೋಲುಣಿಸಿತು.
ವಿಜೇತ ಕರ್ನಾಟಕ ತಂಡ ಹಾಗೂ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ ಆಳ್ವಾಸ್ ಕಾಲೇಜಿನ ಆಟಗಾರ್ತಿಯರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
0 Comments