ಮಾಜಿ ಸಚಿವ ಕೆ.ಅಭಯಚಂದ್ರರಿಗೆ ಎಂಸಿಎಸ್ ಬ್ಯಾಂಕಿನಿಂದ "ಕಲ್ಪವೃಕ್ಷ"ಪ್ರಶಸ್ತಿಪ್ರದಾನ
ಮೂಡುಬಿದಿರೆ ಕೋ-ಅಪರೇಟಿವ್ ಸರ್ವೀಸ್ ಸೊಸೈಟಿಯ 70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023, ಸಪ್ತ ಸಂಧ್ಯಾ ಸಹಕಾರಿ ಚಿಂತಣಿ ಮತ್ತು ಸಾಂಸ್ಕೃತಿಕ ವೈಭವ ಹಾಗೂ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರಿಗೆ "ಕಲ್ಪವೃಕ್ಷ - 2023" ನ್ನು ಶನಿವಾರ ಸಂಜೆ ಪ್ರದಾನ ಮಾಡಲಾಯಿತು.
ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿ ಸಹಕಾರ ಕ್ಷೇತ್ರವನ್ನು ಕೇವಲ ಹಣಕಾಸಿನ ವ್ಯವಸ್ಥೆಗೆ ಸೀಮಿತಗೊಳಿಸದೆ.ಅದನ್ನು ಜನರ ಕ್ಷೇತ್ರವನ್ನಾಗಿಸಲು ಸಹಕಾರ ಆಂದೋಲನವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಉಡುಪಿ ಪಲಿಮಾರು ಮಠ ಶ್ರೀಮನ್ ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಅವರು ಸಾಹಿತಿ ಸದಾನಂದ ನಾರಾವಿ ಅವರು ಎಂಸಿಎಸ್ ಬ್ಯಾಂಕಿನ ಸಾಧನೆಗಳ ಕುರಿತು ಬರೆದ ಸೇವಾ ಸಾಧನೆಗೆ ಶೋಭೆ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ, ಊರೊಂದು ಬೆಳಗಬೇಕಾದರೆ ಉತ್ತಮ ಶಿಕ್ಷಣ ಸಂಸ್ಥೆಗಳು, ಭಕ್ತಿಯ ಆರಾಧನಾ ಕೇಂದ್ರಗಳು, ಆಸ್ಪತ್ರೆಗಳು ಮಾತ್ರ ಇದ್ದರೆ ಸಾಲದು ಜನರಿಗೆ ಉತ್ತಮ ಸಹಕಾರ ನೀಡುವ ಸಹಕಾರಿ ಸಂಸ್ಥೆಗಳೂ ಇರಬೇಕು. ಆರ್ಥಿಕ ವ್ಯವಸ್ಥೆಯನ್ನು ಜನೋಪಯೋಗಿಯಾಗಿಸುವ ನಿಟ್ಟಿನಲ್ಲಿ ವಿನಿಯೋಗಿಸಿದಾಗ ಸಹಕಾರಿ ಸಂಸ್ಥೆಗಳು ಉನ್ನತಿಗೇರುತ್ತದೆ ಎಂದು ನುಡಿದರು.
ಸೊಸೈಟಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದನ ಭಾಷಣ ಮಾಡಿ, ತಮ್ಮ ರಾಜಕೀಯ ವಿರೋಧಿಗಳನ್ನು ಆತ್ಮೀಯರಂತೆ ಕಂಡು, ಪಕ್ಷನಿಷ್ಠೆಯನ್ನು ಯಾವುದೇ ಸಂದರ್ಭದಲ್ಲಿ ಬಿಡದ ಅಭಯಚಂದ್ರ ಜೈನ್ ಶಾಸಕ, ಸಚಿವರಾದಾಗಲೂ, ಆ ಬಳಿಕ ರಾಜಕೀಯ ನಿವೃತ್ತಿ ಪಡೆಯುತ್ತಿದ್ದರೂ ಪ್ರಾಮಾಣಿಕವಾಗಿ, ಭ್ರಷ್ಟಾಚಾರ ರಹಿತವಾಗಿ ವ್ಯಕ್ತಿತ್ವ ರೂಪಿಸಿಕೊಂಡವರು ಎಂದರು.
ಸಹಕಾರಿ ತರಬೇತಿ ಕೇಂದ್ರದ ರಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಳೆಕೊಯ್ಲು, ಕಲ್ಪವೃಕ್ಷ ಆರೋಗ್ಯ ಕಾರ್ಡ್, ಫಲುನಾನುಭವಿಗಳಿಗೆ ಚೆಕ್, ಅನುದಾನಿತ, ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ , ಮೈಸೂರು ವಿಭಾಗ ಸಹಕಾರ ಸಂಘಗಳ ಜಂಟಿ ನಿಬಂಧಕ ಉಮೇಶ್ ಮುಖ್ಯ ಅತಿಥಿಯಾಗಿದ್ದರು.
ವಿಶೇಷ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿದರು.
0 Comments