ಇನ್ನು ಮುಂದೆ ಕಂಬಳದಲ್ಲಿ ಮೊಳಗುತ್ತೆ ಸೈರನ್ : ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು

ಜಾಹೀರಾತು/Advertisment
ಜಾಹೀರಾತು/Advertisment

 ಇನ್ನು ಮುಂದೆ ಕಂಬಳದಲ್ಲಿ ಮೊಳಗುತ್ತೆ ಸೈರನ್ : ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು



ಮೂಡುಬಿದಿರೆ: ಕಂಬಳವನ್ನು 24 ಗಂಟೆಯೊಳಗೆ ಮುಗಿಸಲು ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು ನಿಗದಿತ ಸಮಯದಲ್ಲಿ ಕೋಣಗಳನ್ನು  ಕಂಬಳದ ಕರೆಗೆ ಇಳಿಸದಿದ್ದರೆ ಇನ್ನು ಮುಂದೆ ಸೈರನ್ ಮೊಳಗುತ್ತೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.  



ಮೂಡುಬಿದಿರೆ ಬಲ್ಲಾಳ್ ಹೋಟೆಲ್ ಸಭಾಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರರ ಸಭೆಯಲ್ಲಿ ಅವರು  ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ನಡೆಯುವ ಕಂಬಳದಲ್ಲಿ  ಕೋಣಗಳು ಕರೆಗೆ ಇಳಿಯುವುದು ವಿಳಂಬವಾದಲ್ಲಿ ಸೈರನ್ ಮೊಳಗಿಸಿ ಎಚ್ಚರಿಸಲಾಗುವುದು. ನಂತರವೂ ವಿಳಂಬವಾದಲ್ಲಿ ಅಂತಹ ಕೋಣಗಳನ್ನು ಬದಿಗಿಟ್ಟು ಮುಂದಿನ ಕೋಣಗಳಿಗೆ ಅವಕಾಶ ಕಲ್ಪಿಸಲಾಗುವುದು. ಟಿ.ವಿ ತೀರ್ಪುಗಾರರು, ಸ್ಕೈವ್ಯೂವ್ ವ್ಯವಸ್ಥೆಯಲ್ಲೂ ಹೊಸತನದ ಬದಲಾವಣೆಗಳು ಆಗಲಿವೆ. ಕಂಬಳಗಳಲ್ಲಿ ಸೈರನ್ ಮೊಳಗಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. 

ತೀರ್ಪುಗಾರರಿಗೂ ಮಾರ್ಗಸೂಚಿಯನ್ನು ನೀಡಲಾಗಿದ್ದು, ಅವರು ಯಾರ ಒತ್ತಡಕ್ಕೊಳಗಾಗದೆ ನಿರ್ಭೀತಿಯಿಂದ ತೀರ್ಪು ನೀಡಬೇಕು. ತೀರ್ಪುಗಾರರು ಸಮಯಕ್ಕೆ ಸರಿಯಾಗಿ ಕಂಬಳಕ್ಕೆ ಬಂದು ಕೊನೆಯವರೆಗೂ ಹಾಜರಿರಬೇಕು. ಕಂಬಳದಲ್ಲಿ ಯಾವುದೇ ಸಮಸ್ಯೆಗಳು ಬಂದಲ್ಲಿ ರೋಹಿತ್ ಹೆಗ್ಡೆ ನೇತೃತ್ವದ ಶಿಸ್ತು ಸಮಿತಿ ಪರಿಶೀಲನೆ ನಡೆಸಿ ಬಗೆಹರಿಸಲಿದೆ. 

ನ.11 ರಂದು ಕಾರ್ಕಳದ ಮಿಯ್ಯಾರಿನಲ್ಲಿ ನಡೆಯುವ ಪ್ರಾಯೋಗಿಕ ಕಂಬಳದಲ್ಲಿ ಹೊಸ ಮಾರ್ಗಸೂಚಿಗಳ ಪಾಲನೆ ಮಾಡಲಾಗುವುದು ಎಂದರು.

ಕಾರ್ಯಾಧ್ಯಕ್ಷ ಗುಣಪಾಲ ಕಡಂಬ ಮಾತನಾಡಿ ಬೆಂಗಳೂರು ಕಂಬಳದಲ್ಲಿ ವೀಕ್ಷಕ ವಿವರಣೆ ಕನ್ನಡದಲ್ಲಿ ನಡೆಯಲಿದೆ ಆದರೆ ತುಳು ಭಾಷೆಯನ್ನು ಬಿಡುವುದಿಲ್ಲ. ನೀರು, ಕರೆ ಹಾಗೂ ನೆರಳಿಗೆ ಆದ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದರು.

ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ,  ಗೌರವ ಅಧ್ಯಕ್ಷ ರೋಹಿತ್ ಹೆಗ್ಡೆ,   ಕೋಶಾಧಿಕಾರಿ  ಚಂದ್ರಹಾಸ ಸನಿಲ್, ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಪಿ.ಆರ್ ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್, ಮೋರ್ಲ ಗಿರೀಶ್ ಆಳ್ವ, ಅರುಣ್ ಭಟ್, , ತೀರ್ಪುಗಾರರ ಸಮಿತಿಯ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments