ಮೂಡುಬಿದಿರೆ: ಜನರು ಸೇವಾ ವಲಯದಲ್ಲಿ, ಆಹಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಾದರೆ ಕೃಷಿ ಕ್ಷೇತ್ರಕ್ಕಿಂತಲೂ ಹೆಚ್ಚು ಆದಾಯ ಪಡೆಯಬಹುದು. ಕೃಷಿಗಾಗಿ ಕಾರ್ಮಿಕರನ್ನು ಅವಲಂಬಿಸುವುದು ಕಡಿಮೆಯಾಗಿ ಮನೆಯವರೆ ಹೆಚ್ಚು ಕೆಲಸಲ್ಲಿ ತೊಡಗಿಸಿಕೊಳ್ಳಬೇಕು. ಅದರ ಜತೆಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಆಗಬೇಕು. ಆಗ ಮಾತ್ರ ಲಾಭದಾಯಕವಾಗಲು ಸಾಧ್ಯ ಎಂದು ಎಸ್‌ಕೆಡಿಆರ್‌ಡಿಪಿ ಯೋಜನೆ ಧರ್ಮಸ್ಥಳ ಇದರ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಲ್.ಹೆಚ್ ಮಂಜುನಾಥ ಹೇಳಿದರು.
ಎಂಸಿಎಸ್ ಸೊಸೈಟಿ ವತಿಯಿಂದ ನಡೆಯುತ್ತಿರುವ ಸಹಕಾರ ಸಪ್ತಾಹದ ಬುಧವಾರದ ಕಾರ್ಯಕ್ರಮದಲ್ಲಿ ಕೃಷಿ ಋಷಿ-ರೈತರ ಸಂಕಷ್ಟ ಮತ್ತು ಪರಿಹಾರ ವಿಷಯದ ಕುರಿತು ಮಾತನಾಡಿದರು. ಶೇಖಡಾ ೫೫ ರಷ್ಟು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಈ ಕ್ಷೇತ್ರದಿಂದ ಶೇಖಡಾ ೧೫ರಷ್ಟು ಜಿಡಿಪಿ ದೇಶದ ಪ್ರಗತಿ ಸಿಗುತ್ತಿದೆ. ಕರಾವಳಿ ಭಾಗದಲ್ಲಿ ಅಡಿಕೆ. ಕೊಕ್ಕೊ, ಇನ್ನಿತರ ವಾಣಿಜ್ಯ ಬೆಳೆಗಳಿಗೆ ವಿಪುಲ ಅವಕಾಶವಿದ್ದು ಇಲ್ಲಿನ ರೈತರ ಆದಾಯ ಉತ್ತಮ ಸ್ಥಿತಿಯಲ್ಲಿದೆ ಎಂದರು.
ಕೆವಿಕೆ ಬ್ರಹ್ಮಾವರ ಇದರ ವಿಜ್ಞಾನಿ ಡಾ.ರವಿರಾಜ್ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಅಡಿಕೆ ಕೃಷಿಗೆ ಭೂಮಿ ಬಳಕೆ ಹೆಚ್ಚಾಗುತ್ತಿದ್ದು ಭವಿಷ್ಯದಲ್ಲಿ ಬೌಗೋಳಿಕ ಅಸಮತೋಲನಕ್ಕೆ ಕಾರಣವಾಗಬಹುದು. ಅನುಭವಿ ಕೂಲಿ ಕಾರ್ಮಿಕರ ಕೊರತೆ ಕೃಷಿ ಹಿನ್ನಡೆಗೆ ಕಾರಣ ಎಂದರು. ಸಿಒಡಿಪಿ ನಂತೂರು ಇದರ ನಿರ್ದೇಶಕರಾದ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆ ವಹಿಸಿದರು. ಮೂಡುಬಿದಿರೆ ಚರ್ಚ್ನ ಧರ್ಮಗುರು ಒನಿಲ್ ಡಿಸೋಜ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲ್ಲೂಕು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಸಿಇಒ ಧರಣೇಂದ್ರ ಜೈನ್ ಉಪಸ್ಥಿತರಿದ್ದರು.
ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಸೋಸೈಟಿಯ ಪ್ರಗತಿಯ ವಿವರ ನೀಡಿದರು.
ವಲಯದ ಸರಕಾರಿ ಶಾಲೆಗಳಿಗೆ ನಗದು ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ವಿಶೇಷ ಕರ್ತವ್ಯಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿದರು. ಗಣೇಶ್ ಕಾಮತ್ ನಿರೂಪಿಸಿದರು. ಜಯರಾಮ್ ಕೋಟ್ಯಾನ್ ವಂದಿಸಿದರು.
0 Comments