ಇಂದಿನ ಅಮೃತ ಭಾರತಕ್ಕೆ ತಳಹದಿಯಾದವರು ಶಾಸ್ತ್ರೀ:
ಮೂಡುಬಿದಿರೆ: ಅಮೃತಕಾಲದ ಇಂದಿನ ಭಾರತದಲ್ಲಿ ದೇಶ ಇಟ್ಟಿರುವ ಅಭಿವೃದ್ಧಿಯ ಹೆಜ್ಜೆಗಳಿಗೆ ತಳಹದಿಯ ರೂಪದಲ್ಲಿ ಶಾಸ್ತ್ರೀಜಿಯವರು ದಿಟ್ಟ ನಿರ್ಧಾರಗಳಿಂದ ಮರೆಯಲಾಗದ ನೆನಪಾಗಿ ಉಳಿಯುತ್ತಾರೆ ಆದರೆ ಗಾಂಧೀಜಿಯವರು ದೇಶವನ್ನು ಆವರಿಸಿಕೊಂಡ ರೀತಿಯಿಂದಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರಂತಹ ಮುತ್ಸದ್ದಿಯ ಬಗ್ಗೆ ಇಂದಿನ ಯುವಪೀಳಿಗೆಗೆ ತಿಳುವಳಿಕೆ ಇಲ್ಲದಾಗಿದೆ ಎಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಗಣೇಶ್ ಕಾಮತ್ ಮೂಡುಬಿದಿರೆ ಹೇಳಿದರು.
ಅವರು ರೋಟರಿ ಕ್ಲಬ್ ವತಿಯಿಂದ ಗಾಂಧೀ ಶಾಸ್ತ್ರೀ ಜಯಂತಿ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಯ್ಕಾಟ್ ಚೀನಾ ಮೂಲಕ ಸ್ವದೇಶೀ ಚಿಂತನೆ, ಸಾರಿಗೆ ಸಚಿವರಾಗಿದ್ದಾಗ ಮೊದಲ ಬಾರಿಗೆ ಮಹಿಳಾ ಕಂಡಕ್ಟರ್‌ಗಳ ನೇಮಕಾತಿಯ ಮೂಲಕ ಮೀಸಲಾತಿಯ ಜತೆಗೆ ಮಹಿಳಾ ಸಬಲೀಕರಣ, ದೇಶೀಯವಾಗಿ ರೈಲ್ವೇ ಕೋಚ್‌ಗಳ ನಿರ್ಮಾಣಕ್ಕೆ ಚಾಲನೆಯ ಮೂಲಕ ಮೇಕ್ ಇನ್ ಇಂಡಿಯಾ, ರಾಷ್ಟ್ರೀಯ ಏಕತಾ ಸಮಾವೇಶದ ಮೂಲಕ ಸಬ್ ಕಾ ವಿಕಾಸ್ ಹೀಗೆ ಇಂದಿನ ಪ್ರಗತಿಗೆ ಅಂದಿನ ನೀಲನಕ್ಷೆಯಾದವರು ಶಾಸ್ತ್ರೀ ಎಂದವರು ಹೇಳಿದರು.
ಜತೆಯಾಗಿದ್ದಾಗಲೇ ಪ್ರಗತಿ ಎಂದ ಶಾಸ್ತ್ರೀಜಿಯೂ ಗಾಂಧೀಜಿಯಿಂದ ಪ್ರಭಾವಿತರಾಗಿ ದೇಶಸೇವೆಗೆ ಬಂದವರು ಸರಳತೆ, ಶಿಸ್ತಿನ ಜೀವನ, ಸ್ವರಾಜ್ಯಕ್ಕಾಗಿ ಹೋರಾಟದಲ್ಲಿ ಗಾಂಧೀಜಿಯವರ ಜತೆ ಸಮಾನತೆ ಹೊಂದಿದವರು. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗೆ ಕಾರಣರಾಗಿ ಪಾಕ್ ವಿರುದ್ಧ ಹೋರಾಟದಲ್ಲಿ ರಣಾಂಗಣಕ್ಕೇ ಬ ಸರ್ಜಿಕಲ್ ಸ್ಟ್ರೈಕ್ ಮಾದರಿಗೆ ಪ್ರೇರಣೆಯಾದ ಅವರ ದಿಟ್ಟತನ, ಅಧಿಕಾರದಲ್ಲಿದ್ದಾಗಲೂ ಪಾಲಿಸಿದ ಸರಳತೆ ಸರಿಸಾಟಿ ಇಲ್ಲದ್ದು ಎಂದವರು ಹೇಳಿದರು.
ರೋಟರಿ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಸ್ವಾಮಿ ಅತಿಥಿಯನ್ನು ಪರಿಚಯಿಸಿದರು. ಕಾರ್ಯದರ್ಶಿ ನಾಗರಾಜ ವಂದಿಸಿದರು.
0 Comments