ಜೈನ ಪಾಠ ಉದ್ಘಾಟನೆ ಹಾಗೂ ಜಿನಧರ್ಮ ದೀಪಿಕೆ ಕೃತಿ ಬಿಡುಗಡೆ
ಮೂಡುಬಿದಿರೆ : ಅಹಿಂಸಾ ಪರಮೋಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟದ್ದನ್ನು ತ್ಯಜಿಸಿ ಒಟ್ಟೆಯದನ್ನು ಅನುಸರಿಸುವುದೇ ವೃತ, ಮನುಷ್ಯಜನ್ಮ ಸಿಗುವುದು ತುಂಬಾ ವಿರಳ. ಈ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಜೈನಧರ್ಮದ ತತ್ವಗಳನ್ನು ವಿಜ್ಞಾನವೂ ಕೂಡ ಒಪ್ಪುತ್ತದೆ. ಪ್ರತಿಯೊಂದು ಜೀವಿಯೂ ದೇವರಾಗಬಹುದು. ಅಧ್ವೈತ ಜ್ಞಾನದ ಮೂಲಕ ಮೋಕ್ಷವನ್ನು ಸಾಧಿಸುವ ಬದಲಾಗಿ, ಅಹಿಂಸೆಯ ಮೂಲಕ ಮೋಕ್ಷವನ್ನು ಸಂಪಾದಿಸುವುದು ಜೈನಧರ್ಮದ ಉದ್ದೇಶವಾಗಿದೆ. ಆ ಜೈನ ಧರ್ಮದ ಮೂಲಗಳು ಪಂಚಪರಮೇಷ್ಠಿಗಳ ಉಪದೇಶಗಳ ಮೇಲೆ ನಿರೂಪಿತವಾಗಿವೆ. ಪ್ರತೀ ದಿನ ನಾವು ನಿಷ್ಕಲ್ಮಶ ಮನಸ್ಸಿನಿಂದ ಪ್ರಾರ್ಥಿಸಿದರೆ ದೇವರ ಒಲುಮೆಗೆ ಪಾತ್ರರಾಗುತ್ತೇವೆ. ಅಂತಹ ಮನಸ್ಸಿನಿಂದ ತೀರ್ಥಂಕರರ ಮೇಲೆ ಭಕ್ತಿಯನ್ನು ಹೊಂದಿ ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳಬೇಕು ಎಂದು ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜೈನ ಪಾಠ ಉದ್ಘಾಟನೆ ಹಾಗೂ ಜಿನಧರ್ಮ ದೀಪಿಕೆ ಕೃತಿ ಬಿಡುಗಡೆಯ ಸಮಾರಂಭದಲ್ಲಿ ಜೈನಮಠ ಕಂಬದ ಹಳ್ಳಿಯ ಪರಮಪೂಜ್ಯ ಸ್ವಸ್ತಿ ಶ್ರೀ ಬಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಮ ಮಹಾಸ್ವಾಮೀಜಿಯವರು ಜೈನ ಪಾಠ ಉದ್ಘಾಟಿಸಿ, ಜಿನಧರ್ಮ ದೀಪಿಕೆ ಕೃತಿ ಬಿಡುಗಡೆಗೊಳಿಸಿ ಅಶೀರ್ವಚನಗಳನ್ನು ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್‌ಜೈನ್, ವಿದ್ಯೆಗೆ ಸಂಸ್ಕಾರ ಭೂಷಣ, ಜೈನ ಧರ್ಮದಲ್ಲಿ ಹುಟ್ಟುವುದೇ ಮಹಾ ಪುಣ್ಯ. ಅದರ ಫಲವನ್ನು ನಾವು ಪಡೆಯಬೇಕಾಗಿದೆ. ಜೀವನದಲ್ಲಿ ಧಾರ್ಮಿಕತೆಗೆ ಬೆಲೆ ಕೊಡಬೇಕು. ಭಕ್ತಿ, ಭಾವವಿಲ್ಲದೆ ಮನುಷ್ಯ ಜನ್ಮ ಸಾರ್ಥಕತೆ ಪಡೆಯುವುದಿಲ್ಲ. ಜೈನಧರ್ಮದಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಾಗ ಬದುಕು ಪಾವನವಾಗುತ್ತದೆ. ಎಲ್ಲಾ ಪುರಾತನಧರ್ಮ ಗ್ರಂಥಗಳಲ್ಲಿ ಜೈನಧರ್ಮದ ಉಲ್ಲೇಖವಿದೆ. ಜೈನ ಪಾಠಗಳಿಂದ ಆತ್ಮದ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೂಡಬಿದಿರೆ ಜೈನ್ ಮಿಲನ್‌ನ ಅಧ್ಯಕ್ಷರು ದಿನೇಶ್ ಆನಡ್ಕ, ಚೌಟರ ಅರಮನೆಯ ಕುಲದೀಪ್, ಪ್ರಾಂಶುಪಾಲರಾದ ಪ್ರದೀಪ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಜೈನಧರ್ಮ ದೀಪಿಕೆ ಪುಸ್ತಕದ ಸಂಪಾದಕರಾದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕಡಾ. ಸಂಪತ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ವಂದಿಸಿದರು. ಉಪನ್ಯಾಸಕ ರಂಜಿತ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.
0 Comments