ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ
‘ಹದಿಹರೆಯದಲ್ಲಿ ಸಮಾಲೋಚನೆ ಅತ್ಯವಶ್ಯ : ಡಾ.ವಿನಯ್ ಆಳ್ವ
ಮೂಡುಬಿದಿರೆ : ‘ಹದಿಹರೆಯದ ವಿದ್ಯಾರ್ಥಿಗಳು ದೈಹಿಕ ಸಮತೋಲನ ಕಾಪಾಡಿಕೊಂಡಿದ್ದರೂ, ಮಾನಸಿಕವಾಗಿ ಚಂಚಲತೆ ಹೊಂದಿರುತ್ತಾರೆ. ಅವರ ಜೊತೆ ಸಮಾಲೋಚನೆ ಅತ್ಯವಶ್ಯ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ.ವಿನಯ್ ಆಳ್ವ ಹೇಳಿದರು.
ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನದ ಹಿನ್ನೆಲೆಯಲ್ಲಿ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗವು ಆಳ್ವಾಸ್ ದುಶ್ಚಟ ಮುಕ್ತ ಕೇಂದ್ರ ಪುರ್ನಜನ್ಮ ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನಿಮ್ಮ ಸಮಯ ಬದುಕು ಬದಲಿಸಬಹುದು’ ಜಾಗೃತಿ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ವಯಸ್ಸಿನಲ್ಲಿ ಬುದ್ಧಿಮತ್ತೆಯ ಪ್ರಮಾಣ ಅಧಿಕವಾಗಿದ್ದರೂ, ಭಾವನಾತ್ಮಕ ಬುದ್ಧಿವಂತಿಕೆ ಕಡಿಮೆ ಇರುತ್ತದೆ. ಸ್ಪರ್ಧೆಯ ಕಾರಣದಿಂದ ವಿದ್ಯಾರ್ಥಿಗಳಲ್ಲಿ ಒತ್ತಡ ಜಾಸ್ತಿಯಾಗುತ್ತಿದ್ದು, ಈ ಅನಾರೋಗ್ಯಕರ ಸ್ಪರ್ಧೆಯನ್ನು ಮೊಟಕುಗೊಳಿಸಲೇಬೇಕಾದ ತುರ್ತು ಇದೆ ಎಂದು ಅವರು ಅಭಿಪ್ರಾಯ ಪಟ್ಟರು.
ಬದಕಿಗೆ ಶಿಕ್ಷಣ ಒಂದೇ ಮಾನದಂಡವಲ್ಲ. ಆಧುನಿಕ ಜಗತ್ತು ವ್ಯಕ್ತಿಯ ಸಾಮರ್ಥ್ಯ, ಸೃಜನಾತ್ಮಕತೆ ಹಾಗೂ ಪ್ರತಿಭೆಗೆ ಆದ್ಯತೆ ನೀಡುತ್ತದೆ. ಮೂರನೇ ತರಗತಿ ಕಲಿತಿದ್ದ ರಾಜಕುಮಾರ್ ಅಭಿನಯದಿಂದ ಮನಸೂರೆಗೊಳಿಸಿದರೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮಾರಾಜ ನಡಾರ್ ಬಿಸಿಯೂಟದಂತ ಸರ್ವಶ್ರೇಷ್ಠ ಕಾರ್ಯಕ್ರಮವನ್ನು ಮೊದಲು ನಾಡಿಗೆ ನೀಡಿದ್ದರು ಎಂದು ಉಲ್ಲೇಖಿಸಿದರು.
ವಿದ್ಯಾರ್ಥಿಗಳು ಆತ್ಮಸ್ಥೈರ್ಯಕ್ಕಾಗಿ ಶ್ರೇಷ್ಠ ವ್ಯಕ್ತಿಗಳ ಆತ್ಮ ಚರಿತ್ರೆ ಓದಬೇಕು. ಬಯೋಪಿಕ್‌ಗಳನ್ನು ವೀಕ್ಷಿಸಬೇಕು. ಇದು ಮನಸ್ಸಿನ ಋಣಾತ್ಮಕ ಅಂಶಗಳನ್ನು ನಿರ್ಮೂಲನೆ ಮಾಡುವುದರ ಜೊತೆಗೆ ಆತ್ಮವಿಶ್ವಾಸವನ್ನು ಉತ್ತೇಜಿಸುತ್ತದೆ ಎಂದರು.
ದೈಹಿಕ ನ್ಯೂನತೆ ಎಂದೂ ಸಾಧನೆಗೆ ಅಡ್ಡಿಯಾಗದು. ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಬಿತಾ ಮೋನಿಸ್ ಅವರ ಕಾರ್ಯವೈಖರಿಯೇ ಇದಕ್ಕೆ ಮಾದರಿ ಎಂದು ಅವರು ವಿವರಿಸಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೋ. ಸದಾಕತ್ ಮಾತನಾಡಿ, ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಪೋಷಕರಲ್ಲಿ ಹಂಚಿಕೊಳ್ಳದ ಕಾರಣ ಸಮಸ್ಯೆಗಳು ಉಲ್ಭಣವಾಗುತ್ತಿವೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಾಗ ಉನ್ನತವಾದುದನ್ನು ಸಾಧಿಸಲು ಸಾಧ್ಯ’ ಎಂದರು.
ಆಳ್ವಾಸ್ ದುಶ್ಚಟ ಮಕ್ತ ಕೇಂದ್ರ ಪುನರ್ಜನ್ಮದ ಆತ್ಮಸಮಾಲೋಚಕ ಲೋಹಿತ್ ಉಪನ್ಯಾಸ ನೀಡಿದರು.
ಪದವಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ, ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಕಲಾ ಸಂಘದ ಸಂಯೋಜಕ ದಾಮೋದರ ಸಾಲಿಯನ್ ಇದ್ದರು.
ತನುಶ್ರೀ ಸ್ವಾಗತಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ್ ವಂದಿಸಿದರು.
0 Comments