ಮೂಡುಬಿದಿರೆ : ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಆಶ್ರಯದಲ್ಲಿ ' ಶ್ರಾವಣ ಸಂಜೆ' ಕಾರ್ಯಕ್ರಮದಲ್ಲಿ 'ಮಹಿಳೆಯರ ಸ್ವೋದ್ಯೋಗ ' ಕುರಿತು ವಿಶೇಷ ಮಾಹಿತಿ ಕಾರ್ಯಕ್ರಮ ಶನಿವಾರ ನಡೆಯಿತು.
ಪುತ್ತೂರಿನ ಸ್ವೋದ್ಯೋಗ ತರಬೇತುದಾರರಾದ ರೋಹಿಣಿ ಎಂ.ಪಿ. ಅವರು ಮಾಹಿತಿ ನೀಡಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸ್ವೋದ್ಯೋಗಿಗಳಾಗುವುದು ಅಗತ್ಯ. ಮನೆಯಲ್ಲಿಯೇ ಇದ್ದು ಹಲವಾರು ಬಗೆಯ ಉಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಇಲ್ಲವೇ ಮಾರುಕಟ್ಟೆ ಕಂಡುಕೊಳ್ಳಲು ಮಹಿಳೆಯರು ಮುಂದಾಗಬೇಕು ಎಂದರು.
ಸ್ವೋದ್ಯೋಗ ಎಂದಾಕ್ಷಣ ದೊಡ್ಡ ಮೊತ್ತದ ಬಂಡವಾಳ, ಸಾಲದ ವ್ಯವಸ್ಥೆ ಎಲ್ಲ ಬೇಕಾಗುವುದು ಎಂಬ ಚಿಂತನೆ ಸಲ್ಲದು. ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ, ಸಾಂಬಾರು , ಚಟ್ನಿ ಪುಡಿ, ಮ್ಯಾಟ್, ಕಸೂತಿ ಮೊದಲಾದ ವಸ್ತು ಗಳ ತಯಾರಿ, ಭಜನೆ, ಸಂಗೀತ ತರಬೇತಿ, ತ್ಯಾಜ್ಯ ವಸ್ತುಗಳಿಂದ ಗೃಹೋಪಯೋಗಿ ವಸ್ತುಗಳನ್ನು ಮಹಿಳೆಯರು ಅಲ್ಪ ಸ್ವಲ್ಪ ಕೌಶಲದಿಂದ ತಯಾರಿಸತೊಡಗಿ, ನಾಲ್ಕು ಮಂದಿಗೆ ಪರಿಚಯಿಸಿ, ಮಾರುಕಟ್ಟೆ ಕುದುರಿಸುವ ಕಲೆಯನ್ನೂ ಬೆಳೆಸಿಕೊಂಡರೆ
ಸಂತೃಪ್ತಿಕರ ಆದಾಯವನ್ನು ತನ್ಮೂಲಕ ಗೌರವಪೂರ್ಣ, ಸ್ವಾವಲಂಬಿ ಬದುಕನ್ನು ನಡೆಸಲು ಸಾಧ್ಯ ಎಂದರು.
ದೇವಸ್ಥಾನ ದ ಆಡಳಿತ ಮೊಕ್ತೇಸರ, ಪುರೋಹಿತ ಎನ್. ಜಯಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಓದುತ್ತಿರುವ ಸಮಾಜದ ನಾಲ್ವರು ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ, ಶ್ರೀ ಕಾಳಿಕಾಂಬಾ ಸೇವಾಸಮಿತಿ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಭಾಗವಹಿಸಿದ್ದರು
ಮಹಿಳಾ ಸಮಿತಿ ಅಧ್ಯಕ್ಷೆ ಸುಜಾತಾ ಬಾಲಕೃಷ್ಣ ಆಚಾರ್ಯ ಸ್ವಾಗತಿಸಿದರು.
ಕಾರ್ಯದರ್ಶಿ ಪೂರ್ಣಿಮಾ ವಿಘ್ನೇಶ ಆಚಾರ್ಯ ನಿರೂಪಿಸಿದರು.
ರೋಹಿಣಿ ಎಂ.ಪಿ. ಅವರನ್ನು ಗೌರವಿಸಲಾಯಿತು.
ಜತೆಕಾರ್ಯದರ್ಶಿ ಪ್ರತಿಮಾ ಅಶ್ವತ್ಥಾಮ ಆಚಾರ್ಯ ವಂದಿಸಿದರು.
0 Comments