ಆಳ್ವಾಸ್‌ನಲ್ಲಿ ಐಇಇಇ ಘಟಕ ಸ್ಥಾಪನೆ
ಮೂಡುಬಿದಿರೆ : ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ‘ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಐಇಇಇ) ವಿದ್ಯಾರ್ಥಿ ಘಟಕವನ್ನು ಐಇಇಇ ಮಂಗಳೂರು ಘಟಕದ ಅಧ್ಯಕ್ಷ ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕರಾದ ಡಾ.ಮೋಹಿತ್ ಪಿ. ತಹಿಲಿಯಾನಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಐಇಇಇ ತಂಡ ಸ್ಥಾಪನೆಯಿಂದ ಎಂಜಿನಿಯರಿಂಗ್‌ನ ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದರು.
ಸಂಶೋಧನಾ ಲೇಖನಗಳು, ನಿಯತಕಾಲಿಕಗಳು ಇತ್ಯಾದಿ ಜೊತೆ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಕಲ್ಪಿಸಲು ಐಇಇಇ ನೆರವಾಗಲಿದೆ ಎಂದರು.
ದೈನಂದಿನ ಬಳಕೆಯ ಅಂತರ್ಜಾಲ, ವೈಫೈ, ಬ್ಲೂಲ್ ಟೂತ್ ಇತ್ಯಾದಿಗಳನ್ನು ಐಇಇಇ ಉನ್ನತೀಕರಿಸಲಿದೆ. ಐಇಇಇ ಒಟ್ಟು ೧೦ ಜಾಗತಿಕ ‘ಪ್ರದೇಶ’ ಎಂದು ವಿಭಜಿಸಿದೆ. ಐಇಇಇ ಭಾರತದ ಮಂಡಳಿಯನ್ನು ೧೯೭೬ರ ಮೇ ೨೦ರಂದು ಸ್ಥಾಪಿಸಲಾಗಿದ್ದು, ಇದು ಏಷ್ಯಾ ಫೆಸಿಪಿಕ್ ಪ್ರದೇಶದ ಐದು ಮಂಡಳಿಗಳಲ್ಲಿ ಒಂದಾಗಿದೆ. ಇವೆಲ್ಲ ಆಯಾ ಪ್ರದೇಶದ ಬೇಡಿಕೆಗೆ ಸ್ಪಂದಿಸಲಿದೆ. ಅಂತಹ ೧೩ ಘಟಕಗಳು ದೇಶದಲ್ಲಿವೆ. ಈ ಪೈಕಿ ಬೆಂಗಳೂರು ೧೦ನೇ ಘಟಕವಾಗಿದ್ದು, ಬೆಂಗಳೂರಿನ ಉಪಘಟಕದ ಪೈಕಿ ಮಂಗಳೂರು ಒಂದಾಗಿದೆ.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಮಂಗಳೂರು ಉಪ ಘಟಕದ ೨೨ನೇ ವಿದ್ಯಾರ್ಥಿ ಘಟಕವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡೀಸ್ ಮಾತನಾಡಿದರು.
ಐಇಇಇ ಬೋಧಕ ಸಮಾಲೋಚಕರಾದ ಡಾ.ಮಂಜುನಾಥ ಕೊಠಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಆಳ್ವಾಸ್ ಐಇಇಇ ವಿದ್ಯಾರ್ಥಿ ಘಟಕದ ಅಧ್ಯಕ್ಷ ನೀರವ್ ವಿ. ಪಟೇಲ್, ಸಹ ಅಧ್ಯಕ್ಷೆ ಗಾಯತ್ರಿ ಸಿ.ಬಿ. ಇದ್ದರು. ಕಾಲೇಜಿನ ವಿವಿಧ ನಿಕಾಯಗಳ ಡೀನ್, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 Comments