ಮೂಡುಬಿದಿರೆ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಮಹಾಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಮಹಾಸಭೆ

ಸದಸ್ಯರಿಗೆ ತಲಾ ೨ ಬೋನಸ್ ಷೇರು ಘೋಷಣೆ 

 


ಮೂಡುಬಿದಿರೆ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಲಿ. ಇದರ ೨೦೨೨-೨೩ನೇಯ ಸಾಲಿನ ಮಹಾಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಎಂ. ಬಾಹುಬಲಿ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿ ಇರುವ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಭಾನುವಾರ ಜರಗಿತು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಬಾಹುಬಲಿ ಪ್ರಸಾದ್ ಅವರು ದೇಶದ ಆರ್ಥಿಕ ಭದ್ರತೆಗೆ ಸಹಕಾರಿ ಕ್ಷೇತ್ರದ ಕೊಡುಗೆ ದೊಡ್ಡದು. ಸೊಸೈಟಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಸಾಂಗಿಕವಾಗಿ ಕಾರ್ಯನಿರ್ವಹಿಸಿರುವುದರಿಂದ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. 

ಸೊಸೈಟಿಯ ನೂತನ ಕಟ್ಟಡಕ್ಕೆ ೧೨ ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಪ್ರತೀ ಸದಸ್ಯರಿಗೆ ತಲಾ ೨ ಷೇರುಗಳನ್ನು ಬೋನಸ್ ರೂಪದಲ್ಲಿ ನೀಡುವುದಾಗಿ ಘೋಷಿಸಿದರು. 

ಸೊಸೈಟಿಯು ಚಿನ್ನಕ್ಕೆ ೧೦ಶೇ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು ಮಳೆಕೊಯ್ಲು ರೈತರ ಪಿಂಚಣಿ ಯೋಜನೆಗಳು ಕೂಡ ಮುಂದುವರಿಯಲಿದ್ದು ಸದಸ್ಯರು ಸೊಸೈಟಿಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆಯಿತ್ತರು. 

ವಿಶೇಷ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಮಾತನಾಡಿ ಸಹಕಾರಿ ಹಿತಶಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಇಲಾಖೆಗಳು ನೀಡುವ ನಿರ್ದೇಶನಗಳನ್ನು ನಿರ್ದಾಕ್ಷೀಣ್ಯವಾಗಿ ಪ್ರಶ್ನಿಸುವುದಾಗಿ ತಿಳಿಸಿದರು. 

ಸೊಸೈಟಿಯ ಸಂಪೂರ್ಣ ಹಕ್ಕುಗಳು ಸದಸ್ಯರಿಗೆ ಮೀಸಲಿರಿಸಬೇಕೇ ವಿನಹ ಸರಕಾರಿ ಅಧಿಕಾರಿಗಳಲ್ಲ ಎಂದು ಹೇಳಿದರು. 

ಆರೋಗ್ಯ ಕಾರ್ಡ್ ಕುರಿತು ಸುಧೀರ್ಘ ಚರ್ಚೆಯ ನಂತರ ಮುಂದಿನ ೫ ವರ್ಷಗಳ ವರೆಗೆ ವಿಸ್ತಿರಿಸುದಾಗಿ ಘೋಷಿಸಿದರು. ಸೊಸೈಟಿಯ ಸನದು ಲೆಕ್ಕಪರಿಶೋಧಕರಾಗಿ ಮಂಗಳೂರಿನ ಸರಳಾರಾವ್ ಸಂಸ್ಥೆಯನ್ನು ಮುಂದಿನ ಅವಧಿಗೆ ಪ್ರಕಟಿಸಲಾಯಿತು. 

ಪ್ರಸಕ್ತ ಸಾಲಿನಲ್ಲಿ ೧೧,೮೮೬ ಸದಸ್ಯ ಬಲ ಹೊಂದಿದ್ದು ೧೯.೩೧ಕೋಟಿ ಪಾಲು ಬಂಡವಾಳ ೫೪.೨೪ಕೋಟಿ ಕ್ಷೇಮನಿಧಿ, ೧೨.೯೯ಕೋಟಿ ಇತರೆ ನಿಧಿ ೪೮೮.೩೯ ಕೋಟಿ ಠೇವಣಿಯನ್ನು ಹೊಂದಿದೆ. ೫೭೪.೯೪ ಕೋಟಿ ದುಡಿಯುವ ಬಂಡವಾಳ, ೪೫೮.೧೩ ಕೋಟಿ ಸದಸ್ಯ ಸಾಲ ಸಂಘದ್ದಾಗಿದೆ. ಪ್ರಸಕ್ತ ಸಾಲಿನಲ್ಲಿ ೧೧.೫೦ಕೋಟಿ ನಿವ್ವಳ ಲಾಭ ಗಳಿಸಿಕೊಂಡಿದ್ದು,, ಕಳೆದ ದಶಕದಿಂದಲೂ ಲಾಭದಲ್ಲಿ ಏರಿಕೆಯತ್ತಲೇ ಸಾಗಿದೆ. ಹಲವಾರು ವರ್ಷಗಳಿಂದ ಎ ಗ್ರೇಡ್ ಲೆಕ್ಕಪರಿಶೋಧನ ವರ್ಗೀಕರಣ ಹೊಂದಿದ್ದು, ಪ್ರತೀ ಸದಸ್ಯರಿಗೆ ೨೫ಶೇ. ಲಾಭಾಂಶ ನೀಡುತ್ತಿದ್ದು ಈ ಬಾರಿಯು ಮುಂದುವರಿಸಲಾಗಿದೆ. 

   ಸಂಘದ ಸಿಆರ್‌ಎಆರ್ ೧೬.೭೬ಶೇ. ಹೊಂದಿರುವುದು ಸದೃಢತೆಗೆ ಸಾಕ್ಷಿಯಾಗಿದೆ. ಸೊಸೈಟಿ ಸದಸ್ಯರ ಆರೋಗ್ಯಕ್ಕಾಗಿ ಕಲ್ಪವೃಕ್ಷ ಆರೋಗ್ಯ ಕಾರ್ಡ್, ರೈತರ ಪಿಂಚಣಿ, ಸೋಲಾರ್ ಅಳವಡಿಕೆಗೆ ಅನುದಾನ, ಮಳೆಕೊಯ್ಲು ಅಳವಡಿಕೆ ಸಂಘದ ವತಿಯಿಂದ ಆಳ್ವಾಸ್ ಹೆಲ್ತ್ ಸೆಂಟರ್ ಮೂಲಕ ನಡೆಸಲ್ಪಡುವ ೨ ಡಯಾಲೀಸಿಸ್ ಮೆಷಿನ್ ಹಾಗೂ ೧ ವೆಂಟಿಲೇಟರ್‌ನಲ್ಲಿ ಸದಸ್ಯರಿಗೆ ರಿಯಾಯಿತಿ ದರದ ಸೌಲಭ್ಯ, ೨೦೧೯ರಿಂದ ಮಳೆಕೊಯ್ಲು ಯೋಜನೆಯಡಿ ತಲಾ ರೂ. ೫ ಸಾವಿರ ಪ್ರೋತ್ಸಾಹಧನ, ಪವರ್ ಟಿಲ್ಲರ್, ಟ್ರಾಕ್ಟರ್ ಖರೀದಿಗೆ ನಿಬಡ್ಡಿಯಲ್ಲಿ ಸಾಲ, ನೌಕರರ ಕ್ಷೇಮನಿಧಿ ವಿನಿಯೋಗಿಸಿ ಪಿಂಚಣಿ ಯೋಜನೆ, ೫೬ ವರ್ಷ ವಯಸ್ಸಿನ ಮೇಲ್ಪಟ್ಟ ರೈತ ಸದಸ್ಯರು ವಾರ್ಷಿಕ ರೂ. ೧೨ಸಾವಿರದಂತೆ ೫ ವರ್ಷ ಪಾವತಿಸಿದ್ದಲ್ಲಿ ೬ನೇ ವರ್ಷದಿಂದ ಅಜೀವಮಾನ ಪರ್ಯಂತ ಬ್ಯಾಂಕಿನಿಂದ ವಾರ್ಷಿಕ ರೂ. ೧೨ಸಾವಿರ ಪಾವತಿ, ಸೋಲಾರ್ ಲೈಟ್ ವಾಟರ್ ಹೀಟರ್‌ಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ, ಸ್ಥಳೀಯ ರೈತರಿಗೆ ಉಚಿತ ತರಕಾರಿ ಮಾರುಕಟ್ಟೆ ಸೌಲಭ್ಯ ಹೊಂದಿರುವುದಾಗಿ ಸಭೆಯಲ್ಲಿ ಪ್ರಕಟಿಸಲಾಯಿತು. 

ಕ್ಯಾನ್ಸರ್, ಹೃದ್ರೋಗ ಮತ್ತು ಕಿಡ್ನಿ ಸಮಸ್ಯೆ ಹೊಂದಿದವರಿಗೆ ಚಿಕಿತ್ಸೆಗೆಗಾಗಿ ಗರಿಷ್ಠ ರೂ. ೧೫ಸಾವಿರ, ಮರಣನಿಧಿಯಾಗಿ ರೂ. ೧೨ಸಾವಿರನ್ನು ನೀಡಲಾಗುತ್ತಿದೆ. ಆದಾಯ ತೆರಿಗೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಸೊಸೈಟಿಗೆ ಸುಮಾರು ೬ ಕೋಟಿ ರೂ. ಉಳಿತಾಯವಾಗಿದೆ. ಸದಸ್ಯರು ಸೊಸೈಟಿಯಲ್ಲಿ ವ್ಯವಹಾರಗಳನ್ನು ನಡೆಸುವ ಮೂಲಕ ಪ್ರೋತ್ಸಾಹ ನೀಡುವಂತೆಯೂ ವಿನಂತಿಸಲಾಗಿದೆ. 

ಸೊಸೈಟಿ ಉಪಾಧ್ಯಕ್ಷೆ ಪ್ರೇಮಾ ಎಸ್. ಸಾಲ್ಯಾನ್, ನಿರ್ದೇಶಕರಾದ ಎಂ. ಗಣೇಶ್ ನಾಯಕ್, ಜೋರ್ಜ್ ಮೊನೀಸ್, ಮನೋಜ್ ಶೆಟ್ಟಿ, ಸಿ. ಹೆಚ್. ಅಬ್ದುಲ್ ಗಫೂರ್, ಎಂ. ಪಿ. ಅಶೋಕ್ ಕಾಮತ್, ಎಂ. ಜ್ಞಾನೇಶ್ವರ ಕಾಳಿಂಗ ಪೈ , ಎಂ. ಜಯರಾಮ ಕೋಟ್ಯಾನ್, ಎಂ. ಪದ್ಮನಾಭ, ದಯಾನಂದ ನಾಯ್ಕ, ಅನಿತಾ ಶೆಟ್ಟಿ, ವಿಮಲ್ ಕುಮಾರ್ ಶೆಟ್ಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಧರಣೇಂದ್ರ ಜೈನ್ ಉಪಸ್ಥಿತರಿದ್ದರು.  

ಸಂಘದ ಸಿಬ್ಬಂದಿ ಹೆರಾಲ್ಡ್ ತಾವ್ರೋ ಪ್ರಾರ್ಥಿಸಿದರು. ಜಯರಾಮ್ ಕೋಟ್ಯಾನ್ ಸ್ವಾಗತಿಸಿದರು. ಮಂಜುನಾಥ ಎಸ್. ಮಹಾಸಭೆಯ ನೋಟೀಸ್ ಓದಿದರು. ಧರಣೇಂದ್ರ ಜೈನ್ ವಾರ್ಷಿಕ ವರದಿ ಮಂಡಿಸಿದರು. ಕೆ. ರಘುವೀರ ಕಾಮತ್ ಲೆಕ್ಕಪರಿಶೋಧನ ವರದಿ ಮಂಡಿಸಿದರು. ಸಂತೋಷ್ ನಾಯ್ಕ್ ಬಜೆಟ್ ಮಂಡಿಸಿದರು. ಜ್ಞಾನೇಶ್ವರ ಕಾಳಿಂಗ ಪೈ ಧನ್ಯವಾದವಿತ್ತರು. ಸಿಬ್ಬಂದಿಗಳು ಸಹಕರಿಸಿದರು.

Post a Comment

0 Comments