ಮೂಡುಬಿದಿರೆ : ಇಲ್ಲಿನ ಜ್ಯೋತಿನಗರದಲ್ಲಿರುವ ಜೈನ ಮೆಡಿಕಲ್ ಸೆಂಟರ್ ಆಶ್ರಯದಲ್ಲಿ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ಆಟೋರಿಕ್ಷಾ ಚಾಲಕ ಮಾಲಕರ ಸಂಘ, ಗೂಡ್ಸ್ ಟೆಂಪೊ ಚಾಲಕ- ಮಾಲಕರ ಸಂಘದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜೈನ್ ಮೆಡಿಕಲ್ ಸೆಂಟರ್‌ನಲ್ಲಿ ಗುರುವಾರ ನಡೆಯಿತು.
ರಿಕ್ಷಾ – ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಸದಾ ರಾತ್ರಿ ಹಗಲೆನ್ನದೆ ಶ್ರಮವಹಿಸಿ ದುಡಿಯುತ್ತಿರುವ ಆಟೋರಿಕ್ಷಾ ಚಾಲಕರಿಗೆ ಉತ್ತಮ ಆರೋಗ್ಯ ಲಭಿಸುವ ನಿಟ್ಟಿನಲ್ಲಿ ತಪಾಸಣೆ ಅಗತ್ಯವಾಗಿದ್ದು ಇದಕ್ಕೆ ಸಂಸ್ಥೆಗಳು ಪೂರಕವಾಗಿ ಸ್ಪಂದಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಜೈನ ಮೆಡಿಕಲ್ ಸೆಂಟರ್‌ನ ಡಾ. ಪ್ರಣಮ್ಯ ಜೈನ್ ಆರೋಗ್ಯ ಮಾಹಿತಿ ನೀಡಿ ದೇಶದ ಜನಸಂಖ್ಯೆಯಲ್ಲಿ ಶೇ ೧೦ ರಷ್ಟು ಮಂದಿ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ದೈನಂದಿನ ಆಹಾರದಲ್ಲಿನ ವ್ಯತ್ಯಯ, ವ್ಯಾಯಾಮವಿಲ್ಲದಿರುವುದು ಕಾರಣವಾಗಿದೆ. ಸೂಕ್ತ ವ್ಯಾಯಾಮ, ಸರಿಯಾದ ವಿಶ್ರಾಂತಿ, ವ್ಯಸನಗಳಿಂದ ದೂರವಿರುವುದರಿಂದ ಇದರಿಂದ ಮುಕ್ತರಾಗಬಹುದು ಎಂದರು.
ಡಾ. ಮಹಾವೀರ ಜೈನ್ ಉಚಿತ ಆರೋಗ್ಯ ಶಿಬಿರದ ಪ್ರಯೋಜನಗಳನ್ನು ವಿವರಿಸಿದರು. ರೋಟರಿ ಟೆಂಪಲ್ ಟೌನ್ ನ ಅಧ್ಯಕ್ಷ ರೊನಾಲ್ಡ್ ಫೆರ್ನಾಂಡೀಸ್, ಕಾರ್ಯದರ್ಶಿ ಅಜಯಗ್ಲೆನ್ ಡಿಸೋಜ, ನಿಯೋಜಿತ ಅಧ್ಯಕ್ಷ ಪೂರ್ಣಚಂಧ್ರ ಜೈನ್ ಉಪಸ್ಥಿತರಿದ್ದರು.
ಸಾಮಾನ್ಯ ರೋಗ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ, ಕಿವಿ, ಮೂಗು, ಗಂಟಲು ತಪಾಸಣೆ ನಡೆಸಲಾಯಿತು.
0 Comments