ಗುಂಡ್ಯಡ್ಕ ವಿಠೋಬ ರುಕುಮಾಯಿ ದೇವಸ್ಥಾನದಲ್ಲಿ ನಿತ್ಯಾನ್ನದಾನಕ್ಕೆ ಚಾಲನೆ
ಮೂಡುಬಿದಿರೆ, ಜು. 18: ಇಲ್ಲಿಗೆ ಸಮೀಪದ ಗುಂಡ್ಯಡ್ಕ ಶ್ರೀನಿವಾಸಪುರ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದಲ್ಲಿ ನಿತ್ಯಾನ್ನದಾನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಪುರುಷೋತ್ತಮ ಮಾಸ (ಅಧಿಕ ಶ್ರಾವಣ) ಪ್ರಯುಕ್ತ ಇಂದಿನಿಂದ ಆ. 16ರ ವರೆಗೆ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಪ್ರಾಂಶುಪಾಲ ಡಾ| ಸತ್ಯನಾರಾಯಣ ಆಚಾರ್ಯ, ಯಾವುದೇ ಒಂದು ಊರಿನಲ್ಲಿ ದೇವಾಲಯ ಹಾಗೂ ಶಾಲೆ ಇಲ್ಲದಿದ್ದಲ್ಲಿ ಆ ಊರು ಕುಗ್ರಾಮ ಎಂದೆನಿಸುತ್ತದೆ. ಅಂಥ ಊರಿನಲ್ಲಿ ಉತ್ತಮ ಸಂಸ್ಕಾರ ಸಿಗಲು ಸಾಧ್ಯವಿಲ್ಲ ಎಂದರು.
ಪುರುಷೋತ್ತಮ ಮಾಸ ಎಂದು ಪರಿಗಣಿಸಲ್ಪಟ್ಟಿರುವ ಅಧಿಕ ಶ್ರಾವಣ ಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ ನಡೆಸಲು ಯೋಚಿಸಿರುವುದು ಸ್ತುತ್ಯರ್ಹ. ಬತ್ತಿ ಮತ್ತು ಎಳ್ಳೆಣ್ಣೆ (ತೈಲ) ಬಳಸಿ ಜ್ಯೋತಿ ಪ್ರಜ್ವಲಿಸುವ ಕ್ರಮವನ್ನು ಸ್ನೇಹ ಎಂದು ಕರೆಯಲಾಗುತ್ತದೆ. ಸ್ನೇಹವಿಲ್ಲದ ಆರಾಧನೆ ವ್ಯರ್ಥ ಎಂದರು.
ಮಂಗಳೂರು ಶ್ರೀರಾಧಾಕೃಷ್ಣ ದೇವಸ್ಥಾನದ ಅರ್ಚಕ ಹಾಗೂ ಜ್ಯೋತಿಷಿ ಎಂ. ಗಿರಿಧರ ಭಟ್, ಡೊಂಗರಕೇರಿ ಕಾಶಿಸದನ ಪ್ರಧಾನ ಪುರೋಹಿತ ಜಯರಾಮ ಭಟ್ ಚಿಂಚಳ್ಕರ್, ಅಲಂಗಾರು ಮಹಾಲಿಂಗೇಶ್ವರ ದೇವಳ ಪ್ರಧಾನ ಅರ್ಚಕ ಈಶ್ವರ ಭಟ್, ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಮೊಕ್ತೇಸರ ಕಿರಣ್ ಮಂಜನಬೈಲು, ಕರ್ಹಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಉಡುಪಿ ಅಧ್ಯಕ್ಷ ಪಾಂಡುರಂಗ ಲಾಗ್ವನ್ ಕರ್, ಪತ್ರಕರ್ತ ಡಾ| ಮಂದಾರ ರಾಜೇಶ ಭಟ್, ಕೇಮಾರು ದತ್ತಾತ್ರೇಯ ಭಜನಾ ಮಂದಿರ ಆಡಳಿತ ಮೊಕ್ತೇಸರ ಮಹಾದೇವ ಭಟ್ ಪರಾಡ್ಕರ್, ಗುಂಡ್ಯಡ್ಕ ವಿಠೋಬ ರುಕುಮಾಯಿ ದೇವಳ ಅಧ್ಯಕ್ಷ ಪಾಂಡುರಂಗ ಭಟ್ ಸಪ್ರೆ, ದೇವಳದ ಪವಿತ್ರಪಾಣಿ ರಮೇಶ ಭಟ್, ಕರ್ಹಾಡ ಬ್ರಾಹ್ಮಣ ಸುಧಾರಕ ಸಂಘ ಶ್ರೀನಿವಾಸಪುರ ಅಧ್ಯಕ್ಷ ರಾಮಚಂದ್ರ ಭಟ್ ನಾಟೇಕರ್ ಬೆಳುವಾಯಿ, ರಾಮಚಂದ್ರ ಭಟ್ ನ್ಯಾಯತೋಟ ಕಾಂತಾವರ, ವಕೀಲ ಕೆ. ಆರ್. ಪಂಡಿತ್, ಉದ್ಯಮಿ ಪ್ರಭಾಕರ ಎನ್. ಪರಾಡ್ಕರ್ ಮೂಡುಬಿದಿರೆ, ಮಹಿಳಾ ಸಂಘ ಪ್ರತಿನಿಧಿ ನಿರ್ಮಲಾ ಆರ್. ಪಂಡಿತ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಗೀತಾ ಸಪ್ರೆ, ಕಾರ್ಯಕ್ರಮ ಸಂಯೋಜಕ ಪುರೋಹಿತ ಸುಬ್ರಹ್ಮಣ್ಯ ಭಟ್ ಪರಾಡ್ಕರ್, ಲಕ್ಷ್ಮೀಕಾಂತ ಪರಾಡ್ಕರ್ ಸ್ವಾಗತಿಸಿ, ವಂದಿಸಿದರು. ಬಾಲಕ ಮುಕುಲ್ ಕೃಷ್ಣ ವೇದಘೋಷಗೈದರು.
ಕಾರ್ಯಕ್ರಮಕ್ಕೂ ಮುನ್ನ ಪಾಕಶಾಲೆಯಲ್ಲಿ ಗಣಪತಿ ಹವನ, ಶ್ರೀದೇವರ ಸನ್ನಿಧಿಯಲ್ಲಿ ತೈಲ ಮತ್ತು ಘೃತ ದೀಪ ಪ್ರಜ್ವಲನೆ, ದೇವತಾ ಪ್ರಾರ್ಥನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಾಚಾರ್ಯ ಡಾ| ಪದ್ಮನಾಭ ಮರಾಠೆ ಅವರಿಂದ `ಪುರುಷೋತ್ತಮ ಮಾಸದ ಮಹತ್ವ' ಬಗ್ಗೆ ಉಪನ್ಯಾಸ ನಡೆಯಿತು
0 Comments