ಖಾಸಗಿ ಜಾಗದವರಿಂದ ರಸ್ತೆಗೆ ಗೇಟ್, ಸಾರ್ವಜನಿಕರಿಗೆ ತೊಂದರೆ, ಮೌನವಹಿಸಿದ ಮುತ್ತೂರು ಪಂಚಾಯತ್

ಜಾಹೀರಾತು/Advertisment
ಜಾಹೀರಾತು/Advertisment

 ಖಾಸಗಿ ಜಾಗದವರಿಂದ ರಸ್ತೆಗೆ ಗೇಟ್, ಸಾರ್ವಜನಿಕರಿಗೆ ತೊಂದರೆ, ಮೌನವಹಿಸಿದ ಮುತ್ತೂರು ಪಂಚಾಯತ್



ಮೂಡುಬಿದಿರೆ: ಖಾಸಗಿ ಜಾಗದ ವ್ಯಕ್ತಿಗಳು ರಸ್ತೆಗೆ ಗೇಟ್ ಹಾಕಿ ಬೀಗ ಜಡಿದದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಹಿತ ಪಂಚಾಯತ್ ಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳದೆ ಮೌನ ವಹಿಸಿರುವ ಘಟನೆ ನಡೆದಿದೆ.

  ರಸ್ತೆಗೆ ಅಡ್ಡವಾಗಿ ಗೇಟ್ ಅಳವಡಿಸಿ ಬೀಗ ಜಡಿದು ಸುಮಾರು 20 ಮನೆಗಳ ಜನರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಮುತ್ತೂರು ಗ್ರಾ.ಪಂಚಾಯತ್ ವ್ಯಾಪ್ತಿಯ ಕುಳವೂರು ಗ್ರಾಮದ ಬಡಕಾಯಿಬೆಟ್ಟು ಎಂಬಲ್ಲಿ.

   ಈ ರಸ್ತೆಯು ಸುಮಾರು 7-8 ವರ್ಷಗಳ ಹಿಂದೆ ರಚನೆಯಾಗಿತ್ತು. 4 ವರ್ಷಗಳ ಹಿಂದೆ ಶಾಸಕರ ನಿಧಿ ರೂ 10ಲಕ್ಷ ಅನುದಾನದಲ್ಲಿ ಸಾರ್ವಜನಿಕ ರಸ್ತೆಗೆ ಕಾಂಕ್ರೀಟ್ ಅಳವಡಿಸಲಾಗಿದೆ. ಆದರೆ ರಸ್ತೆಯ ಆರಂಭದಲ್ಲಿ ಸುಮಾರು 20 ಮೀಟರ್ ನಷ್ಟು ಜಾಗವು ಖಾಸಗಿ ವ್ಯಕ್ತಿಗಳಿಗೆ ಸಂಬಂಧಪಟ್ಟಿದ್ದರಿಂದ ಅಲ್ಲಿ ಖಾಲಿ ಬಿಡಲಾಗಿತ್ತು. 



 ಇದರಿಂದ ಖಾಸಗಿ ಜಾಗದ ವ್ಯಕ್ತಿಗಳು ವೈಯಕ್ತಿಯ ಧ್ವೇಷದಿಂದ 7 ತಿಂಗಳ ಹಿಂದೆ ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ಸಾರ್ವಜನಿಕರ ಓಡಾಟಕ್ಕೆ ಅಡ್ಡಿ ಪಡಿಸಿದ್ದರು. ಆದರೆ ಜನರು ತಾವು ತಮ್ಮ ವಾಹನಗಳಲ್ಲಿ ಹೋಗುವಾಗ ಬರುವಾಗ ಆ ಕಲ್ಲುಗಳನ್ನು ಪಕ್ಕಕ್ಕೆ ಸರಿಸಿಟ್ಟು ಹೋಗಿ ಬರುತ್ತಿದ್ದರು. ಇದನ್ನು ಸಹಿಸದ ಖಾಸಗಿ ಜಾಗಕ್ಕೆ ಸಂಬಂಧಪಟ್ಟವರು ಇತ್ತೀಚಿನ ಕೆಲವು ದಿನಗಳ ಹಿಂದೆ ರಸ್ತೆಗೆ ಅಡ್ಡವಾಗಿ ಗೇಟ್ ಹಾಕಿ ಬೀಗ ಜಡಿದಿದ್ದಾರೆ. ಇದರಿಂದಾಗಿ ಸಾರ್ವಜನಿಕರು ತೊಂದರೆಯನ್ನು ಅನುಭವಿಸುವಂತ್ತಾಗಿದೆ. 


ಅಲ್ಲದೆ ಇದೇ ಪರಿಸರದಲ್ಲಿ ಪಾಶ್ವ ೯ವಾಯುವಿಗೆ ತುತ್ತಾಗಿರುವ ರಝಾಕ್ ಎಂಬ ವ್ಯಕ್ತಿಯಿದ್ದು ಅವರು ವಾರದಲ್ಲಿ ಮೂರು ದಿವಸ ತಪಾಸಣೆಗೆ ಮತ್ತು ಮಸಾಜ್ ಗೆ ಆಸ್ಪತ್ರೆಗೆ ಹೋಗುವ ಅನಿವಾರ್ಯತೆಯಿದೆ. ಆದರೆ ರಸ್ತೆಯಲ್ಲಿ ಗೇಟ್ ಗೆ ಬೀಗ ಅಳವಡಿಸಿರುವುದರಿಂದ ಅಟೋಗಳು ಅವರ ಮನೆ ಬರಲು ಆಗುತ್ತಿಲ್ಲ ಇದರಿಂದಾಗಿ ಅವರನ್ನು ರಸ್ತೆವರೆಗೆ ಎತ್ತಿಕೊಂಡೇ ಹೋಗಬೇಕಾಗಿದೆ ಆದರೆ ಮನೆಯಲ್ಲಿ ಬೇರೆ ಗಂಡಸರು ಇಲ್ಲದಿರುವುದರಿಂದ ಮನೆಯ ಹೆಂಗಸರು ಕಷ್ಟ ಪಡುವಂತ್ತಾಗಿದೆ.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಯಾನಂದ ಶೆಟ್ಟಿ ಮತ್ತು ಅರವಿಂದ ಶೆಟ್ಟಿ ಅವರು ಸಂಬಂಧಪಟ್ಟ ಗ್ರಾ.ಪಂ, ತಾ.ಪಂ., ಜಿ.ಪಂ.ಇಲಾಖೆಗೆ ಮತ್ತು ಸಹಾಯಕ ಆಯುಕ್ತರಿಗೆ ದೂರು ನೀಡಿದ್ದಾರೆ. ಆದರೆ ಚುನಾವಣೆಯ ನೀತಿ ಸಂಹಿತೆಯ ನೆಪವೊಡ್ಡಿ ಕುಲವೂರು ಗ್ರಾ.ಪಂನ ಅಧಿಕಾರಿಗಳು ಅತ್ತ ಸುಳಿಯದೆ ಮೌನವಹಿಸಿರುವುದು ದುರಂತವೇ ಸರಿ.

ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಬಡಕಾಯಿಬೆಟ್ಟು ಗ್ರಾಮದ ಜನರಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ಬಂದು ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ....!

Post a Comment

0 Comments