ಪಡುಮಾರ್ನಾಡು ಗ್ರಾಮಸಭೆ
ಎರಡು ಕಂಪನಿಗಳಿಂದ ಪರಿಸರ ಮಾಲಿನ್ಯ: ಗ್ರಾಮಸ್ಥರ ಆಕ್ರೋಶ
ಮೂಡುಬಿದಿರೆ : ಪಡುಮಾರ್ನಾಡು ಪಂಚಾಯತ್ ನ ಎರಡನೇ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷೆ ಸಿ.ಎಸ್.ಕಲ್ಯಾಣಿ ಅಧ್ಯಕ್ಷತೆಯಲ್ಲಿ ಸೋಮವಾರ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಬನ್ನಡ್ಕದಲ್ಲಿ ಕಾರ್ಯಚರಿಸುತ್ತಿರುವ ಎಸ್ ಕೆಎಫ್ ಎಂಬ ಒಂದೇ ಹೆಸರಿನ ಎರಡು ಉದ್ಯಮಗಳಿಂದ ಹೊರಹೊಮ್ಮುತ್ತಿರುವ ಪೈಂಟ್ ಗಳು, ಪೈಂಟ್ ಕೊಳಚೆ ನೀರು ಪರಿಸರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇದನ್ನು ತಡೆಯುವಂತೆ ಬನ್ನಡ್ಕ ನಿವಾಸಿ ಪ್ರಸನ್ನ ಸಚ್ಚೆರಿಪೇಟೆ ಸಹಿತ ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು.
ಎರಡು ಸಂಸ್ಥೆಗಳ ನಡುವಿನ ವ್ಯಾವಹಾರಿಕ ಸಮಸ್ಯೆ ಪರಿಸರ ಕೋರ್ಟ್ ಮೆಟ್ಟಿಲೇರಿರುವುದು
ತೀರ್ಮಾನ ಹೊರಬಿದ್ದ ಬಳಿಕವಷ್ಟೇ ಪಂಚಾಯತ್ ಕ್ರಮ ಜರಗಿಸುವುದು ಸೂಕ್ತ ಎಂದು ಪಿಡಿಓ ಉಗ್ಗಪ್ಪ ಮೂಲ್ಯ ಅಭಿಪ್ರಾಯಪಟ್ಟರೆ ಎರಡೂ ಕಡೆಯವರನ್ನು ಪಂಚಾಯತ್‌ಗೆ ಕರೆಸಿ ಮಾತುಕತೆ ಮಾಡೋಣ ಎಂದು ಅಧ್ಯಕ್ಷೆ ಕಲ್ಯಾಣಿ ಹೇಳಿದರು.
ಪಡುಮಾರ್ನಾಡು ಶ್ಮಶಾನದ ದಾಖಲೆ ಸರಿಯಾಗದೆ 50 ಸಾವಿರ ರೂ. ವೆಚ್ಚದ ಕಾಮಗಾರಿಗಳನ್ನು ನಡೆಸಿರುವುದು ಸರಿಯಲ್ಲ, ಆ ಮೊತ್ತವನ್ನು ಅಧಿಕಾರಿಗಳು, ಅಧ್ಯಕ್ಷರು ಹಿಂದೆ ಕಟ್ಟಬೇಕು ಎಂದು ನಿರ್ಣಯವಾಗಿದ್ದರೂ ಕಾರ್ಯಗತವಾಗಿಲ್ಲ . ಆದರೆ, ಅಲ್ಲಿ ನಿರಂತರವಾಗಿ ಶವಸಂಸ್ಕಾರ ನಡೆಯುತ್ತಲೇ ಇದೆ. ಅದರ ದಾಖಲೆಗಳನ್ನು ಸರಿಪಡಿಸಿ, ಸೂಕ್ತವಾಗಿ ಅಭಿವೃದ್ಧಿ ಪಡಿಸಬೇಕಾಗಿದೆ. ಇನ್ನೊಂದೆಡೆ ಹೊಸದಾಗಿ ಕಟ್ಟಿದ ಮೂಡುಮಾರ್ನಾಡು ಶ್ಮಶಾನಕ್ಕೆ ಆರೇಳು ಲಕ್ಷ ವೆಚ್ಚವಾಗಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಒಂದೇ ಒಂದು ಹೆಣ ಸುಟ್ಟಿಲ್ಲ. ಅದನ್ನೆಲ್ಲ ಸರಿಪಡಿಸಬೇಕು ಎಂದು ದಯಾನಂದ ಹೆಗ್ಡೆ ಆಗ್ರಹಿಸಿದರು. ಪಡುಮಾರ್ನಾಡು ಶ್ಮಶಾನದ ಬಗ್ಗೆ ಸದಸ್ಯ ರಮೇಶ್ ಶೆಟ್ಟಿ ಅವರೂ ಪೂರಕವಾಗಿ ಮಾತನಾಡಿದರು. ಆದಷ್ಟು ಬೇಗ ದಾಖಲೆ ಸರಿಪಡಿಸುವುದೂ ಸೇರಿದಂತೆ ಎರಡೂ ಶ್ಮಶಾನಗಳ ಬಗ್ಗೆ ಗಮನಹರಿಸುವುದಾಗಿ ಪಿಡಿಓ ಭರವಸೆ ಇತ್ತರು.
ಅಪಾಯಕಾರಿ ವಿದ್ಯುತ್ ತಂತಿ:
ಪಂಚಾಯತ್ ಪರಿಸರದಲ್ಲಿ ಮನೆಗಳ ಮೇಲ್ಗಡೆ ತೀರಾ ಸನಿಹದಲ್ಲಿ ವಿದ್ಯುತ್ ತಂತಿಗಳು ಹಾದುಹೋಗಿರುವುದು ಅಪಾಯಕಾರಿಯಾಗಿದೆ ಎಂದು ಸುಶೀಲಾ ಮತ್ತು ರವಿ ಪ್ರಸ್ತಾಪಿಸಿದಾಗ ಈ ತಂತಿಗಳನ್ನು ಸ್ಥಳಾಂತರಿಸಲು ಮೆಸ್ಕಾಂಗೆ ಕೋರಿಕೆ ಸಲ್ಲಿಸಲು ನಿರ್ಧರಿಸಲಾಯಿತು.
ಮಕ್ಕಳು ಮೊಬೈಲ್ ಬಳಸದಂತೆ ಎಚ್ಚರವಹಿಸಿ ಇಲ್ಲದಿದ್ದರೆ ಅನಾಹುತಕಾರಿ ಸನ್ನಿವೇಶಗಳಿಗೆ ಪೋಷಕರೇ ಜವಾಬ್ದಾರರಾಗುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರತಿ ಎಚ್ಚರಿಸಿದರು.
ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ, ಲೈಸೆನ್ಸ್ ಇಲ್ಲದೆ ಮಕ್ಕಳ ಕೈಗೆ ವಾಹನ ಚಲಾಯಿಸಲು ಕೊಡಬಾರದೆಂದು ಪೊಲೀಸ್ ಇಲಾಖೆಯ ಮಮತಾ ಪೋಷಕರನ್ನು ಎಚ್ಚರಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಉಪಾಧ್ಯಕ್ಷ ಅಭಿನಂದನ್ ಬಳ್ಳಾಲ್ , ಸದಸ್ಯರು ಉಪಸ್ಥಿತರಿದ್ದರು. ತೋಟಗಾರಿಕಾ ಅಧಿಕಾರಿ ಯುಗೇಂದ್ರ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
0 Comments