ಮೂಡುಬಿದಿರೆಯಲ್ಲಿ ಯುವ ಸಪ್ತಾಹ ಮತ್ತು ವಿವೇಕ ರಥ ಜಾಗೃತಿ ಜಾಥಾ
ಮೂಡುಬಿದಿರೆ: ದ.ಕ.ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ತಾ.ಪಂ.ಮೂಡುಬಿದಿರೆ ಪುರಸಭೆ ಹಾಗೂ ಯುವಜನ ಒಕ್ಕೂಟ ಮೂಡುಬಿದಿರೆ ಇವುಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಸಮಾಜ ಮಂದಿರದಲ್ಲಿ ಗುರುವಾರ ಯುವ ಸಪ್ತಾಹ ಮತ್ತು ವಿವೇಕ ರಥ ಯುವ ಪಥ ಯುವ ಜಾಗೃತಿ ಜಾಥಾ ಕಾರ್ಯಕ್ರಮವು ಮೂಡುಬಿದಿರೆಯಲ್ಲಿ ನಡೆಯಿತು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಸಮಾಜ ಮಂದಿರದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಪಂಚವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದವರು ಇಬ್ಬರು ನರೇಂದ್ರರು. ತಾವು ಕೂಡಾ ಶಿಕ್ಷಣವನ್ನು ಪಡೆದು ಐಎಎಸ್ ಮತ್ತು ಐಪಿಎಸ್ ನಂತಹ ಹುದ್ದೆಗಳನ್ನು ಪಡೆಯುವ ಮೂಲಕ ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ್ವಚ್ಛ , ಸದೃಢವಾದ ದೇಶವನ್ನು ಕಟ್ಟುವಲ್ಲಿ ಯುವ ಜನತೆಯ ಪಾತ್ರ ಪ್ರಮುಖವಾದುದು. ಅದೇ ರೀತಿ ತಮ್ಮ ಪರಿಸರವನ್ನು ಸ್ವಚ್ಛವಾಗಿಡುವಲ್ಲಿಯೂ ತಾವು ಕೈ ಜೋಡಿಸಬೇಕು. ಪ್ಲಾಸ್ಟಿಕ್ ಮುಕ್ತ ದೇಶವಾಗಿ ರೂಪುಗೊಳ್ಳುವಂತೆ ತಾವು ಶ್ರಮಿಸಬೇಕಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಸದಸ್ಯ ದೇವಿಪ್ರಸಾದ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿವೇಕಾನಂದರ ಆದರ್ಶಗಳನ್ನು ತಿಳಿಸಿದರು.
ದ.ಕ. ಕೆಎಂಎಫ್ ನ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮೂಡುಬಿದಿರೆ ತಾ.ಪಂನ ಕಾರ್ಯನಿರ್ವಹಣಾಧಿಕಾರಿ ದಯಾವತಿ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇದರ ನೋಡೆಲ್ ಅಧಿಕಾರಿ ಮಾಮಚನ್ ಎಂ, ಯುವಜನ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪಡುಮಾರ್ನಾಡು ಯುವಕ ಮಂಡಲದ ಅಧ್ಯಕ್ಷ ರಮೇಶ್ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ನಾಗಶ್ರೀ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ವೈಷ್ಣವ್ ಹೆಗ್ಡೆ ವಂದಿಸಿದರು.
ಇದಕ್ಕೂ ಮೊದಲು ಮೂಡುಬಿದಿರೆ ಪೇಟೆಯಲ್ಲಿ ವಿದ್ಯಾರ್ಥಿಗಳು ವಿವೇಕ ರಥದೊಂದಿಗೆ ಜಾಗೃತಿ ಜಾಥಾ ನಡೆಸಿದರು.
0 Comments