8 ನೇವಿದ್ಯಾರ್ಥಿಗಳಿಗೆ ಸೈಕಲ್ ಬದಲು ಸ್ಕಾಲರ್ ಶಿಫ್ ನೀಡಿ -ವಿಶೇಷ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳ ಆಗ್ರಹ
ಮೂಡುಬಿದಿರೆ: ಸರಕಾರದಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ಸೈಕಲಿಗೆ ಬದಲಾಗಿ ಸ್ಕಾಲರ್ ಶಿಫ್ ನೀಡುವಂತೆ ಅಳಿಯೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಾಯಕ ಪ್ರಣಾಮ್ ಅಗ್ರಹಿಸಿದ್ದಾರೆ.
ವಾಲ್ಪಾಡಿ ಗ್ರಾಮ ಪಂಚಾಯತ್ ಗೆ ವ್ಯಾಪ್ತಿಯ ಶಾಲೆಗಳಿಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಣಾಮ್ ಅವರು ಈ ಬಗ್ಗೆ ಗ್ರಾ.ಪಂ.ಅಧ್ಯಕ್ಷರು ಮತ್ತು ಅಧಿಕಾರಿಗಳ ಗಮನ ಸೆಳೆದರು.
ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪಿಡಿಒ ರಮೇಶ್ ರಾಥೋಡ್ ತಿಳಿಸಿದರು.
ಕೆಲವು ಶಾಲಾ ಮಕ್ಕಳು ಕ್ಲಾಸ್ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿ ಬಂದು ಬಸ್ ಸ್ಟ್ಯಾಂಡ್ ಗಳಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಸಂಜೆ ಮನೆಗೆ ಹೋಗುವಾಗ ರಸ್ತೆಯ ಮಧ್ಯಭಾಗದಲ್ಲಿ ಹೋಗುತ್ತಾರೆ ಹಾಗೂ ತಾವು ತಿಂದ ಚಾಕಲೇಟು, ಕುರ್ ಕುರೆ ತಿಂಡಿಗಳ ಪ್ಲಾಸ್ಟಿಕ್ ಕಸಗಳನ್ನು ರಸ್ತೆ ಬದಿಗಳಲ್ಲಿಯೇ ಬೀಸಾಡುತ್ತಾರೆ ಎಂದು ಪಂಚಾಯತ್ ಸದಸ್ಯ ಗಣೇಶ್ ಬಿ.ಅಳಿಯೂರು ಸಭೆಯಲ್ಲಿ ತಿಳಿಸಿದಾಗ, ಶಾಲಾ ಶಿಕ್ಷಕಿ ಮಾರ್ಗರೇಟ್ ಮಾತನಾಡಿ ಈ ಬಗ್ಗೆ ಶಾಲಾ ಅಸೆಂಬ್ಲಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗಿದೆ ಆದರೆ ಕೆಲವು ಮಕ್ಕಳು ತಮ್ಮ ಮಾತನ್ನು ಕೇಳುವುದಿಲ್ಲವೆಂದು ತಿಳಿಸಿದರು.
ಸ್ವಚ್ಛತೆ ನಮ್ಮ ಮನಸಿನಲ್ಲಿ ಹುಟ್ಟಬೇಕು ಹೊರತು ಯಾರೂ ಹೇಳಿ ಬರುವಂತದಲ್ಲ. ಕಸ. ವಿಲೇವಾರಿ ಬಗ್ಗೆ ನಾವು ಜಾಗೃತರಾಗಬೇಕು ಎಂದು ಹೇಳಿದ ವಿದ್ಯಾರ್ಥಿ ನಾಯಕ ಬಸ್ಸು ಬೆಳಿಗ್ಗೆ ಬೇಗ ಇರುವುದರಿಂದ ವಿದ್ಯಾರ್ಥಿಗಳು ಬೇಗ ಬರುತ್ತಾರೆ.ಕ್ಲಾಸ್ ಓಪನ್ ಆಗದಿರುವುದರಿಂದ ಬಸ್ ಸ್ಡ್ಯಾಂಡ್ ಗಳಲ್ಲಿ ನಿಲ್ಲುತ್ತಾರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಜಾಗೃತರಾಗುತ್ತೇವೆಂದು ತಿಳಿಸಿದರು.
ಶಾಲೆಗಳಿಗೆ ಕಂಪೌಂಡ್ ಹಾಲ್ ಬೇಕು, ನೀರಿನ ಸಮಸ್ಯೆ ಇದೆ, ಶೌಚಾಲಯದ ಕೊರತೆ ಎಂದು ವಿದ್ಯಾರ್ಥಿಗಳು ಅಧಿಕಾರಿಗಳ ಗಮನಕ್ಕೆ ತಂದಾಗ ಮಾತನಾಡಿದ ಪಿಡಿಒ ಇದೆಲ್ಲಾ ಸಮಸ್ಯೆಗಳನ್ನು ಶಾಲೆಯ ಆಡಳಿತ ಮಂಡಳಿ ಅಥವಾ ಶಿಕ್ಷಕರು ಹೇಳಬೇಕು. ಟೀಚರ್ಸ್ ಗಳು ಹೇಳಿಕೊಟ್ಟದ್ದನ್ನು ನೀವು ಕೇಳುವುದಲ್ಲ ಬದಲಾಗಿ ನಿಮಗೆ ಎಲ್ಲಿಯಾದರೂ ಯಾರಿಂದಾದರೂ ಏನಾದರೂ ಸಮಸ್ಯೆಗಳು ಆಗುತ್ತಿದೆ ಈ ಬಗ್ಗೆ ನಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿ ಶೌಚಾಲಯದ ಸಮಸ್ಯೆಗೆ ಪರಿಹಾರ ಒದಗಿಸುವ ಎಂದು ತಿಳಿಸಿದರು.
ಈ ಹಿಂದೆ ಗ್ರಾಮಸಭೆಯಲ್ಲಿ ಸಲ್ಲಿಸಿರುವ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದರು.
ಪಂಚಾಯತ್ ಅಧ್ಯಕ್ಷ ಪ್ರದೀಪ್‌ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ನೈತಿಕ ಮತ್ತು ಮೌಲ್ಯಯುತವಾದ ಶಿಕ್ಷಣವನ್ನು ಪಡೆಯಬೇಕು. ರ್ಯಾಂಕ್ ಗಳಿಸುವತ್ತ ಗಮನ ಹರಿಸಬೇಕು. ತಾವು ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗಬೇಕು ಆದರೆ ಭ್ರಷ್ಟಾಚಾರಕ್ಕೆ ಕಡಿವಾಣವನ್ನು ಹಾಕುವ ಧ್ಯೇಯವನ್ನು ತಾವು ಹೊಂದಬೇಕೆಂದು ಸಲಹೆ ನೀಡಿದರು.
ಪಂಚಾಯತ್ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಶ್ರೀಧರ್ ಬಂಗೇರಾ ಸಹಿತ ಇತರ ಸದಸ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕೀರ್ತಿ ವಂದಿಸಿದರು.
0 Comments