ಮೂಡುಬಿದಿರೆ: ಇಲ್ಲಿನ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಒಂಟಿಕಟ್ಟೆ ಮೂಡುಬಿದಿರೆ ಇಲ್ಲಿನ 20 ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಶಾಸಕ ಉಮಾನಾಥ ಎ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಡಿ 24 ನಡೆಯಲಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳವನ್ನು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಮುಹೂರ್ತ ಕಾರ್ಯಕ್ರಮವನ್ನು ಚೌಟರ ಅರಮನೆಯ ಕುಲದೀಪ್ ಎಂ ನಡೆಸಿಕೊಡಲಿದ್ದು, ಅಬ್ಬಕ್ಕ ರಾಣಿಯ ಪ್ರತಿಮೆಗೆ ಜಿಲ್ಲಾಧಿಕಾರಿಗಳಾದ ಎಂ.ಆರ್ ರವಿಕುಮಾರ್ ಮಾಲಾರ್ಪಣೆ ಮಾಡಲಿದ್ದಾರೆ.
ಕಂಬಳದ ಪರಂಪರೆಯಂತೆ ಅಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ|ಮೂ| ಈಶ್ವರ್ ಭಟ್, ಅಲಂಗಾರು ಚರ್ಚ್ ಧರ್ಮಗುರು ರೆ|ಫಾ|ವಾಲ್ಟರ್ ಡಿಸೋಜಾ, ಪುತ್ತಿಗೆ ನೂರನಿ ಮಸ್ಜೀದ್‌ನ ಮೌಲಾನಾ ಝಿಯಾವುಲ್ಲ್ ಹಕ್ ಹಾಗೂ ಕುಂಟಾಡಿ ಸುಧೀರ್ ಹೆಗ್ಡೆ ಉದ್ಘಾಟಿಸಲಿದ್ದಾರೆಂದು ಕೋಟಿ-ಚೆನ್ನಯ್ಯ ಕಂಬಳ ಸಮಿತಿಯ ಅಧ್ಯಕ್ಷ , ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಆಳ್ವಾಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ರಾಜ್ಯದ ಮುಖ್ಯಮಂತ್ರಿಗಳು ಭಾನುವಾರ ಬರುವ ನಿರೀಕ್ಷೆ ಇರುವುದರಿಂದ ಅವರಲ್ಲಿ ಶನಿವಾರ ಆಗಮಿಸಿದರೆ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ವೀಕ್ಷಿಸಲು ಬರುವಂತೆ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿಗಳು ಈ ಬಾರಿ ಕಂಬಳ ಕೋಣಗಳ ಓಟದ ಸ್ಪರ್ಧೆಯನ್ನು ವೀಕ್ಷಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೂಡುಬಿದಿರೆಯ ಕಂಬಳವು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಾ ಬಂದಿರುವುದರಿಂದ ಮೊದಲನೇ ಸ್ಥಾನದಲ್ಲಿ ಮೂಡುಬಿದಿರೆ ಕಂಬಳವು ಅಚ್ಚುಕಟ್ಟಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ದರಿಂದ ಈ ಬಾರಿಯ ಕಂಬಳವು 8 ಗಂಟೆಗೆ ಸರಿಯಾಗಿ ಆರಂಭಿಸಲಾಗುವುದು. ಹಾಗಾಗಿ ಕೋಣಗಳ ಯಜಮಾನರುಗಳು ಸಮಯಕ್ಕೆ ಸರಿಯಾಗಿ ಕೋಣಗಳನ್ನು ಕರೆಗೆ ಇಳಿಸಲು ಸಹಕರಿಸಬೇಕು. ತಡವಾಗಿ ಬಂದ ಕೋಣಗಳಿಗೆ ಪ್ರವೇಶವಿಲ್ಲವೆಂದು ತಿಳಿಸಿದರು.
ಮೂಡುಬಿದಿರೆ ಪುರಸಭಾದ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ ಕಡಲಕೆರೆಯಲ್ಲಿ ಈ ಬಾರಿ ನಡೆಯುವ ಕೋಟಿ-ಚೆನ್ನಯ್ಯ ಕಂಬಳ ಕರೆಯಲ್ಲಿ ನಡೆಯುವ ಕೋಟಿ-ಚೆನ್ನಯ್ಯ ಕಂಬಳದಲ್ಲಿ ಶೂನ್ಯತ್ಯಾಜ್ಯ ಕಂಬಳವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ವ್ಯಾಪಾರಸ್ಥರಲ್ಲಿ ಈಗಾಗಲೇ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ನೈಸರ್ಗಿಕ ನಿರ್ಮಿತ ವಸ್ತುಗಳಾದ ಎಲೆ, ಅಡಿಕೆ ಹಾಳೆತಟ್ಟೆಗಳು ಹಾಗೂ ಪರಿಸರ ಪೂರಕವಾದ ಸಮಾಗ್ರಿಗಳ ಸ್ಟಾಲ್‌ನ್ನು ಕಂಬಳದಲ್ಲಿ ಮಾಡಲಾಗುವುದು. ವ್ಯಾಪಾರಸ್ಥರನ್ನು ಕರೆದು ಈಗಾಗಲೇ ಸೂಚನೆ ನೀಡಲಾಗಿದ್ದು, ಶೂನ್ಯ ತ್ಯಾಜ್ಯ ಕಂಬಳಕ್ಕೆ ಎಲ್ಲಾ ವ್ಯಾಪಾರಸ್ಥರು ಸಹನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಆ ದಿನ ಬರುವ ವ್ಯಾಪಾರಸ್ಥರಿಗೂ ಈ ಕುರಿತು ಸೂಕ್ತ ಮಾಹಿತಿಯನ್ನು ನೀಡಿ ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಎಲ್ಲರೂ ಸಹಕರಿಸಬೇಕೆಂದರು.
ಈ ಬಾರಿಯ ಹೊನಲು ಬೆಳಕಿನ ಕಂಬಳದಲ್ಲಿ ಕಂಬಳದಲ್ಲಿ ಸಾಧನೆಗೈದ ಸಾಧಕರಾದ ಪ್ರಗತಿಪರ ಕೃಷಿಕರು, ಹಿರಿಯ ಕಂಬಳ ಕೋಣಗಳ ಯಜಮಾನರು ಇರುವೈಲು ಪಾಣಿಲ ಬಾಡ ಪೂಜಾರಿ ಅವರ (ಮರಣೋತ್ತರ ಗೌರವ ಸನ್ಮಾನ) ಗೌರವ ಸನ್ಮಾನವನ್ನು ಅವರ ಪುತ್ರ ಸ್ವೀಕರಿಸಲಿದ್ದಾರೆ. ಪ್ರಗತಿಪರ ಕೃಷಿಕರು, ಕಂಬಳ ಕೋಣಗಳ ಯಜಮಾನ ಹಾಗೂ ಹಿರಿಯ ದೈವ ಪಾತ್ರಿ ಅಣ್ಣು ಶೆಟ್ಟಿ ಲಾಡಿ, ಪ್ರಗತಿಪರ ಕೃಷಿಕರು, ಕಂಬಳ ಕೋಣಗಳ ಯಜಮಾನರು ಹಾಗೂ ಹಿರಿಯ ಕಂಬಳ ಓಟಗಾರರಾದ ಸಂಜೀವ ಪೂಜಾರಿ, ಪ್ರಗತಿಪರ ಕೃಷಿಕರು, ಕಂಬಳ ಕೋಣಗಳ ಯಜಮಾನರು ಹಿರಿಯ ದೈವ ನರ್ತಕರಾದ ಕಡಂದಲೆ ಮುಡಾಯಿಬೆಟ್ಟು ಕಾಳು ಪಾಣರ, ಪ್ರಗತಿಪರ ಕೃಷಿಕರು, ಕಂಬಳ ಕೋಣಗಳ ಯಜಮಾನರು, ಹಿರಿಯ ಕಂಬಳ ಓಟಗಾರ ವಾಲ್ಪಾಡಿ ಹಾಲಾಜೆ ಲೂಯಿಸ್ ಸಲ್ದಾನ ಹಾಗೂ ಪುತ್ತಿಗೆ ಅರುಣ್ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದೆಂದು ತಿಳಿಸಿದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಕಂಬಳ ಸಮಿತಿಯ ಕೋಶಾಧ್ಯಕ್ಷ ಭಾಸ್ಕರ್ ಎಸ್ ಕೋಟ್ಯಾನ್ ಇರ್ವತ್ತೂರು, ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಕಂಬಳ ಸಮಿತಿಯ ಜಿಲ್ಲಾಧ್ಯಕ್ಷ ರೋಹಿತ್ ಹೆಗ್ಡೆ, ವಕೀಲ ಸುರೇಶ್ ಪೂಜಾರಿ, ಉದ್ಯಮಿಗಳಾದ ರಂಜಿತ್ ಪೂಜಾರಿ, ಯೋಗಿಶ್ ಹಾಗೂ ಕಂಬಳ ಸಮಿತಿಯ ಸದಸ್ಯರು ಸುದ್ದಿಗೋಷ್ಟಿಯಲ್ಲಿದ್ದರು.
0 Comments