'ಚಿಲುಮೆ’ ಸಂಸ್ಥೆಯ ವಿರುದ್ಧ ಕಠಿಣಕ್ರಮ ಕೈಗೊಳ್ಳಲು ಒತ್ತಾಯ

ಜಾಹೀರಾತು/Advertisment
ಜಾಹೀರಾತು/Advertisment


`ಚಿಲುಮೆ’ ಎಂಬ ಹೆಸರಿನ ಖಾಸಗೀ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣವು ರಾಜ್ಯದಾದ್ಯಂತ ವಿವಾದ ಎಬ್ಬಿಸಿದ್ದು ರಾಷ್ಟ್ರೀಯ ರಾಜ್ಯದ್ರೋಹದ ಕೆಲಸ ಮಾಡಿ ಮತದಾರರಿಗೆ ಅನ್ಯಾಯ ಮಾಡಿರುವ ಈ ಸಂಸ್ಥೆ ಮತ್ತು ಅದರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಮಾಧ್ಯಮ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಅವರು  ಆಗ್ರಹಿಸಿದ್ದಾರೆ.

ಬುಧವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ನಮ್ಮ ಜಿಲ್ಲೆಯಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಅನೇಕ ಮತದಾರರ ಹೆಸರನ್ನು ತೆಗೆದು ಹಾಕಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ ಅಲ್ಪಸಂಖ್ಯಾತ ಮತದಾರರ ಹಸರನ್ನೇ ತೆಗೆದು ಹಾಕಲಾಗಿದ್ದು ಇದರಿಂದ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿಗೆ ಪೆಟ್ಟು ಬೀಳಿಸುವಂತಹ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

 ಈಗಾಗಲೇ ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ಬೇರೆ ಬೇರೆ ಕೆಲಸಗಳಿಗೆ ವಿದೇಶಕ್ಕೆ ಹೋಗಿದ್ದು ಅಂತವರ ಹೆಸರನ್ನೇ ತೆಗೆದುಹಾಕಲಾಗಿದೆ, ಅವರು ಊರಿಗೆ ಬಂದಾಗ  ಯಾವ ಸೌಲಭ್ಯವನ್ನೂ ಪಡೆಯುವ ಅವಕಾಶ ವಂಚಿತರಾಗುತ್ತಾರೆ.  ಇಂತಹ ಅನ್ಯಾಯವನ್ನು ಸಂಬಂಧಪಟ್ಟ  ಅಧಿಕಾರಿಗಳು ಕೂಡಲೇ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು.

ಜಿಲ್ಲಾಧಿಕಾರಿಯವರು ಇದೇ ಶುಕ್ರವಾರ ಇರುವೈಲ್‌ನಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆಂದು ಈಗಾಗಲೇ  ಸುದ್ಧಿಯಾಗಿದೆ, ಆದರೆ ಅವರು ಮಧ್ಯಾಹ್ನ ೧೨ ಗಂಟೆಗೆ ಬಂದು ಎರಡೂವರೆ ಗಂಟೆಗೆ ವಾಪಾಸು ಹೋಗುವುದಾದರೆ ಅದು ಗ್ರಾಮ ವಾಸ್ತವ್ಯ ಆಗುವುದು ಹೇಗೆ? ಅದು ಜಿಲ್ಲಾಧಿಕಾರಿಯವರ ಭೇಟಿ ಕಾರ್ಯಕ್ರಮವಾಗುತ್ತದೆ ಎಂದು ಹೇಳಿದ ಅವರು ಇರುವೈಲು ಪರಿಸರದಲ್ಲಿ ಹಲವಾರು ಮಂದಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಒಂದೇ ಸರ್ವೆ ನಂಬರಿನ ಕೇವಲ ೧೫ ಮಂದಿ ತಮಗೆ ಬೇಕಾದವರಿಗೆ ಮಾತ್ರ ಹಕ್ಕುಪತ್ರ ನೀಡುವ ಯೋಜನೆಯನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಕಿಕೊಂಡಿದ್ದಾರೆ, ಇದು ಸರಿಯಲ್ಲ, ಆ ಭಾಗದಲ್ಲಿ ಅರ್ಜಿ ಹಾಕಿದವರೆಲ್ಲರಿಗೂ ಹಕ್ಕು ಪತ್ರ ಸಿಗುವಂತಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರು ಕೂಡಾ ಗಮನಹರಿಸಬೇಕೆಂದು ಒತ್ತಾಯಿಸಿದರು.

ಮೂಡುಬಿದಿರೆಯ ಮಾರ್ಕೆಟನ್ನು  ೬ ತಿಂಗಳ ಮಟ್ಟಿಗೆ ತಾತ್ಕಾಲಿಕವೆಂದು ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು, ವರ್ಷ ೫ ಕಳೆದರೂ ಅಲ್ಲಿನ ಮೂಲ ವ್ಯಾಪಾರಿಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅಲ್ಲಿನ ವ್ಯಾಪಾರಿಗಳ ಪ್ರಸ್ತುತ ಸಮಸ್ಯೆಗಳೂ ದೊಡ್ಡದಿದೆ. ಅದಕ್ಕೆಲ್ಲಾ ಮುಕ್ತಿ ಸಿಗಬೇಕು, ಹಳೆ ಮಾರ್ಕೆಟ್‌ನಲ್ಲಿ  ಯಾರೆಲ್ಲಾ ವ್ಯಾಪಾರಗಳಿದ್ದರೋ ಅವರೆಲ್ಲರಿಗೂ ನ್ಯಾಯಸಿಗಬೇಕೆಂದು ಆಗ್ರಹಿಸಿರುವ ಅವರು ಮೂಡುಬಿದಿರೆಯಲ್ಲಿ ಸಾರ್ವಜನಿಕರಿಗಿದ್ದ ಏಕೈಕ ಸ್ವರಾಜ್ಯ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್‌ಗೆ  ಅವಕಾಶ ನೀಡುವುದರಿಂದ ಈ ಭಾಗದ ಕ್ರೀಡಾಪಟುಗಳಿಗೆ, ಕ್ರಿಕೆಟ್ ಆಟಗಾರರಿಗೆ, ಸಾರ್ವಜನಿಕರಿಗೆ ಅವಕಾಶ ಸಿಗುತ್ತಿಲ್ಲ, ಈ ಸಮಸ್ಯೆಗೂ ಶೀಘ್ರ ಮುಕ್ತಿ ಸಿಗಬೇಕೆಂದು ಒತ್ತಾಯಿಸಿದರು.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣವಿದೆ, ಮತದಾರರ ಒಲವು ಕೂಡ ಕಾಂಗ್ರೆಸ್‌ನತ್ತ ಇದೆ, ಹಾಗಾಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಮತ್ತು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದವರು ವಿಶ್ವಾಸ ವ್ಯಕ್ತ ಪಡಿಸಿದರು. ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ  ಕಾರ್ಯದರ್ಶಿ, ನ್ಯಾಯವಾದಿ ಮರ್ವಿನ್‌ಲೋಬೋ ಪತ್ರಿಕಾಗೋಷ್ಠಿಯಲ್ಲಿದ್ದರು.


Post a Comment

0 Comments