ಬಂಟ್ವಾಳ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಯಾರೋ ಕಿಡಿಗೇಡಿಗಳು ಅಡ್ಡಗಟ್ಟಿ ತಲವಾರು ಝಳಪಿಸಿದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಫಳ್ನೀರು ನಿವಾಸಿ ಅಬ್ದುಲ್ ಖಾದರ್ ರವರ ಪುತ್ರ ರಿಯಾಜ್ ಎಂಬಾತ ಬಂಧಿತ ಆರೋಪಿ.ನಿನ್ನೆ ರಾತ್ರಿ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಅಲ್ಲಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಶಾಸಕ ಹರೀಶ್ ಪೂಂಜಾ ಅವರು ತನ್ನ ಕಾರು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವರನ್ನು ಪಡೀಲ್ ನಿಂದ ಫರಂಗಿಪೇಟೆ ಯವರೆಗೆ ಬೆನ್ನಟ್ಟಿದ್ದು, ಫರಂಗಿಪೇಟೆ ಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯ ಶಬ್ದದಿಂದ ಬೈದು ತಲವಾರು ಝಳಪಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ಶಾಸಕ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದು, ದೂರುದಾರರು ಆರೋಪಿ ಮತ್ತು ವಾಹನವನ್ನು ಗುರುತಿಸಿದ್ದು, ಈ ಹಿನ್ನೆಲೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಓವರ್ ಟೇಕ್ ವಿಷಯದಲ್ಲಿ ಘಟನೆ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದ್ದು , ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಮತ್ತು ಆತನಲ್ಲಿ ಯಾವುದೇ ಆಯುಧ ಪತ್ತೆಯಾಗಿಲ್ಲ ಎಂದು ಮಾಹಿತಿ ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
0 Comments