ಮೂಡುಬಿದಿರೆ : ಭಾರತೀಯ ಜನತಾಪಾರ್ಟಿ ಯುವಮೋರ್ಚಾ ಮೂಲ್ಕಿ ಮೂಡುಬಿದಿರೆ ಮಂಡಲದ ವತಿಯಿಂದ ದರೆಗುಡ್ಡೆಯ ಸಿರಿಸಂಪದ ಫಾರ್ಮ್ನಲ್ಲಿ ನಡೆದ "ಕೆಸರ್ಡೊಂಜಿ ಕಮಲದಿನ" ಕಾರ್ಯಕ್ರಮದ ಮೂಲಕ ಕೆಸರಿನಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು, ಯುವಕರು, ಮಹಿಳೆಯರು ಮತ್ತು ಪುರುಷರು ಭಾಗವಹಿಸುವ ಮೂಲಕ ಒಂದು ದಿನವಿಡೀ ಕೆಸರಿನಲ್ಲಿಯೇ ಆಟವಾಡಿ ಗಮನ ಸೆಳೆದರು.
ಕಾರ್ಯಕ್ರಮವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ದೀಪ ಬೆಳಿಗಿಸಿ, ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಚಾಲನೆಯನ್ನು ನೀಡಿ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಮಕ್ಕಳನ್ನು ಸೇರಿಸಿ ಆಟ ಆಡಿಸುತ್ತಾ ಭಾರತ ದೇಶದ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳನ್ನು ತಿಳಿಸಿ ಅಲ್ಲಿಂದ ದೇಶ ಪ್ರೇಮವನ್ನು ಅವರ ಮನದಲ್ಲಿ ಬಿತ್ತಿ ಅಲ್ಲಿಂದ ಧ್ಯಾನವನ್ನು ಸಂಪಾದಿಸಿ, ರಾಜಕೀಯವಾಗಿ, ರಾಷ್ಟ್ರೀಯ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ, ಜನ ಸಂಘವು ಹಿರಿಯ ಹಾಕಿದ ಹೆಜ್ಜೆಯಲ್ಲಿ ಬೆಳೆದು ನಿಂತಿದೆ. ಸಂಘಟನೆಯನ್ನು ಗಟ್ಟಿಗೊಳಿಸುವ ಕೆಲಸ ಮಾತ್ರವಲ್ಲದೆ ಜತೆ ಜತೆಗೆ ಒಂದಷ್ಟು ಆಟಗಳನ್ನು ಆಡುವ ಮೂಲಕ ಸಂಘಟನೆಯನ್ನು ಬಲಗೊಳಿಸುವ ಪ್ರಯತ್ನಗಳು ನಡೆಯುತ್ತವೆ. ಅಲ್ಲದೆ ದೇಶದ ಆಚಾರ-ವಿಚಾರ, ಕೃಷಿ ಬದುಕಿನ ತಿಳಿಯಲು ಸಹಕಾರಿಯಾಗಲಿದೆ. ಈ ಹಿಂದೆ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ "ಆಟಿಡೊಂಜಿ ದಿನ", "ಕೆಸರ್ಡೊಂಜಿ ದಿನ" ಮುಂತಾದ ಕಾರ್ಯಕ್ರಮಗಳಿಗೆ ಅನುದಾನವನ್ನು ನೀಡಿ ಪ್ರೋತ್ಸಾಹ ನೀಡಿರುವ ಬಗ್ಗೆ ನೆನಪಿಸಿಕೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಮಂಡಲದ ಅಧ್ಯಕ್ಷ ಸುನೀಲ್ ಆಳ್ವ, ಹಿರಿಯ ಮುಖಂಡರುಗಳಾದ ಭುವನಾಭಿರಾಮ ಉಡುಪ, ರಮಾನಾಥ್ ಅತ್ತಾರ್, ಕೆ.ಪಿ.ಜಗದೀಶ ಅಧಿಕಾರಿ, ದಯಾನಂದ ಪೈ, ಕೆ.ಆರ್.ಪಂಡಿತ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾರ ಶಶಿಧರ್, ದರೆಗುಡ್ಡೆ ಗ್ರಾ.ಪಂ.ಅಧ್ಯಕ್ಷೆ ತುಳಸಿ ಮೂಲ್ಯ, ಉಪಾಧ್ಯಕ್ಷರು ಅಶೋಕ್ ಶೆಟ್ಟಿ, ಸದಸ್ಯ ದೀಕ್ಷಿತ್ ಪಣಪಿಲ, ಮಂಡಲ ಅಧ್ಯಕ್ಷ ಪ್ರ.ಕಾರ್ಯದರ್ಶಿಗಳಾದ ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ, ಯುವಮೋರ್ಚಾ ಪ್ರ.ಕಾರ್ಯದರ್ಶಿ ಚರಣ್ ಪೂಜಾರಿ, ಸಂಚಾಲಕ ರಾಹುಲ್ ಕುಲಾಲ್, ಸಿರಿಸಂಪದ ಫಾರ್ಮ್ನ ಮಹಾವೀರ ಜೈನ್, ಸೂರಜ್ ಜೈನ್ ಮಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅಶ್ವತ್ಥ್ ಪಣಪಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಕಾರ್ಯಕರ್ತರಲ್ಲಿ ಬಾಂಧವ್ಯ ವೃದ್ಧಿಸುವ ಚಿಂತನೆಗಳೊಂದಿಗೆ ಮೂಲ್ಕಿ ಮೂಡುಬಿದಿರೆ ಮಂಡಲಕ್ಕೆ ಒಳಪಟ್ಟ ಎಲ್ಲಾ ೯ ಮಹಾಶಕ್ತಿಕೇಂದ್ರಗಳ ಕಾರ್ಯಕರ್ತರಿಗಾಗಿ ಆಯೋಜಿಸಿದ್ದು, ಅವರ ಈ ಪರಿಕಲ್ಪನೆಗೆ ಸೂರ್ಯ ದೇವನು ಶ್ರೀ ರಕ್ಷೆಯನ್ನು ನೀಡಿದ್ದರಿಂದ ಪುರುಷರ ವಿಭಾಗದ ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ, ಮಹಿಳೆಯರ ವಿಭಾಗದ ಹಗ್ಗಜಗ್ಗಾಟ, ಸಮೂಹ ಜಾನಪದ ನೃತ್ಯ, ತ್ರೋಬಾಲ್, ಕಾರ್ಯಕರ್ತರಿಗಾಗಿ ಕೆಸರ್ಗದ್ದೆ ಓಟ, ಹಿಮ್ಮುಖ ಓಟ, ಲಿಂಬೆ ಚಮಚ ಓಟ, ಸಂಗೀತ ಕುರ್ಚಿ ಗದ್ದೆಯಲ್ಲಿ ನಿಧಿ ಶೋಧ ಸ್ಪರ್ಧೆಗಳು ಸಾಂಗವಾಗಿ ನಡೆದವು.
ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯುವಮೋರ್ಚಾ ಪ್ರ.ಕಾರ್ಯದರ್ಶಿ ಚರಣ್ ಪೂಜಾರಿ ವಂದಿಸಿದರು. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸುಮಾರು ೨೦೦೦ ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
0 Comments